ADVERTISEMENT

ರತನ್ ಟಾಟಾ ನಿಧನ: ಅಮೆರಿಕದ ಗಣ್ಯರಿಂದ ನುಡಿ ನಮನ

ಪಿಟಿಐ
Published 10 ಅಕ್ಟೋಬರ್ 2024, 4:34 IST
Last Updated 10 ಅಕ್ಟೋಬರ್ 2024, 4:34 IST
ರತನ್ ಟಾಟಾ ಹೇಳಿಕೆ ನಕಲಿ ಎಂಬ ಸ್ಪಷ್ಟನೆ
ರತನ್ ಟಾಟಾ ಹೇಳಿಕೆ ನಕಲಿ ಎಂಬ ಸ್ಪಷ್ಟನೆ   

ವಾಷಿಂಗ್ಟನ್: ದೇಶದ ಹೆಸರಾಂತ, ಹಿರಿಯ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ ರತನ್ ಟಾಟಾ ನಿಧನಕ್ಕೆ ಅಮೆರಿಕದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತವನ್ನು ಅದ್ಭುತ ಸಮೃದ್ಧಿ ಮತ್ತು ಅಭಿವೃದ್ಧಿಯೆಡೆಗೆ ಕೊಂಡೊಯ್ದ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.

ಟಾಟಾ ಸಮೂಹದ ಮಾಜಿ ಅಧ್ಯಕ್ಷ, ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಬುಧವಾರ ರಾತ್ರಿ 11.30ರ ಸುಮಾರಿಗೆ ಮುಂಬೈನಲ್ಲಿ ಕೊನೆಯುಸಿರೆಳೆದರು.

‘ಗೂಗಲ್‌ ಕಚೇರಿಯಲ್ಲಿ ರತನ್ ಟಾಟಾ ಅವರ ಜೊತೆಗಿನ ನನ್ನ ಕೊನೆಯ ಭೇಟಿಯಲ್ಲಿ ನಾವು ವೇಮೊ ಪ್ರಗತಿಯ ಬಗ್ಗೆ ಮಾತನಾಡಿದ್ದೆವು ಮತ್ತು ಅವರ ದೂರದೃಷ್ಟಿಯು ಅತ್ಯಂತ ಸ್ಫೂರ್ತಿದಾಯಕವಾಗಿತ್ತು. ಅವರು ಅಸಾಧಾರಣ ಉದ್ಯಮಶೀಲ ಮತ್ತು ಲೋಕೋಪಕಾರಿ ಪರಂಪರೆಯನ್ನು ಬಿಟ್ಟುಹೋಗಿದ್ದಾರೆ. ಭಾರತದಲ್ಲಿ ಆಧುನಿಕ ಉದ್ಯಮ ನಾಯಕತ್ವ ಮತ್ತು ಅಭಿವೃದ್ಧಿಯ ಮಾರ್ಗದರ್ಶಕರಲ್ಲಿ ಪ್ರಮುಖರಾಗಿದ್ದರು. ಭಾರತವನ್ನು ಅತ್ಯುತ್ತಮ ದೇಶವನ್ನಾಗಿಸುವ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಿದ್ದರು. ಅವರ ಪ್ರೀತಿಪಾತ್ರರಿಗೆ ನನ್ನ ಸಂತಾಪಗಳು’ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ರತನ್ ಟಾಟಾ ಅವರು ಭಾರತದ ಅನನ್ಯ ಮತ್ತು ಲೋಕೋಪಕಾರಿ ಪುತ್ರ, ಉದಾತ್ತತೆ ಮತ್ತು ಔದಾರ್ಯಕ್ಕೆ ಮಾದರಿ’ ಎಂದು ಅಮೆರಿಕ–ಭಾರತ ಉದ್ಯಮ ಪರಿಷತ್ತಿನ(ಯುಎಸ್‌ಐಬಿಸಿ) ಅಧ್ಯಕ್ಷ ಅತುಲ್ ಕಶ್ಯಪ್ ಹೇಳಿದ್ದಾರೆ.

‘ಕೇವಲ ಲಾಭಕ್ಕಾಗಿ ಉದ್ಯಮ ನಡೆಸುವವರ ಮಧ್ಯೆ, ರತನ್ ಟಾಟಾ ಅವರು ತಮ್ಮ ಕಂಪನಿಗಳು ಮತ್ತು ಭಾರತವನ್ನು ಸಮೃದ್ಧಿ ಮತ್ತು ಅಭಿವೃದ್ಧಿಪಥದತ್ತ ಮುನ್ನಡೆಸುವ ಜೊತೆಗೆ ವಾಣಿಜ್ಯದ ಉದಾತ್ತತೆಯನ್ನು ಜಾಗತಿಕ ಉದ್ಯಮಿಗಳಿಗೆ ನೆನಪಿಸಿದರು. ಅವರು ತಮ್ಮ ಸಹೋದ್ಯೋಗಿಗಳು ಮತ್ತು ವ್ಯಾಪಾರ ಪಾಲುದಾರರಿಗೆ ಮಾತ್ರವಲ್ಲದೆ ಜಗತ್ತಿನ ಒಳಿತಿಗಾಗಿ ಮಾನವೀಯತೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಪ್ರತಿಪಾದಿಸಿದರು’ಎಂದಿದ್ದಾರೆ.

‘ದೂರದೃಷ್ಟಿಯ ಉದ್ಯಮಿ, ಪರೋಪಕಾರಿ ರತನ್ ಟಾಟಾ ನಿಧನವು ಭಾರತೀಯ ಸಮುದಾಯಕ್ಕೆ ಅತ್ಯಂತ ದುಃಖದ ಸುದ್ದಿಯಾಗಿದೆ. ಅವರು ಭಾರತದ ಅತ್ಯಂತ ಗೌರವಯುತ ಉದ್ಯಮಿಗಳಲ್ಲಿ ಒಬ್ಬರಾಗಿದ್ದರು’ಎಂದು ಇಂಡಿಯಾಸ್ಪೋರಾ ಸಂಸ್ಥಾಪಕ ಎಂ.ಆರ್. ರಂಗಸ್ವಾಮಿ ಹೇಳಿದ್ದಾರೆ.

ಕಾರ್ನೆಲ್‌ ವಿಶ್ವವಿದ್ಯಾಲಯದ ಪದವೀಧರ, ಕಾರ್ನೆಲ್ ವಿಶ್ವಿದ್ಯಾಲಯದ ಮಾಜಿ ಟ್ರಸ್ಟಿ ಮತ್ತು ವಿಶ್ವವಿದ್ಯಾಲಯದ ಬಹುದೊಡ್ಡ ದಾನಿ ಎಂದು ಕಾರ್ನೆಲ್ ವಿಶ್ವವಿದ್ಯಾಲಯ ರತನ್ ಟಾಟಾ ಅವರನ್ನು ಸ್ಮರಿಸಿದೆ.

‘ರತನ್ ಟಾಟಾ ಅವರು ಭಾರತ, ವಿಶ್ವ ಮತ್ತು ತಾವು ಹೆಚ್ಚು ಕಾಳಜಿ ಇಟ್ಟುಕೊಂಡಿದ್ದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ವಿಶೇಷ ಪರಂಪರೆಯನ್ನೂ ಬಿಟ್ಟು ಹೋಗಿದ್ದಾರೆ’ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಮಧ್ಯಂತರ ಅಧ್ಯಕ್ಷ ಮೈಲ್ ಐ ಕೊಟ್ಲಿಕೋಫ್ ಹೇಳಿದ್ದಾರೆ.

‘ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ರತನ್ ಟಾಟಾ ಅವರು ವಾಸ್ತುಶಿಲ್ಪದ ಎಂಜಿನಿಯರಿಂಗ್ ಪದವಿ ಪಡೆದಾಗ ವಿವಿಧ ವಲಯಗಳಲ್ಲಿ ಸಂಶೋಧನೆ ಮತ್ತು ಶಿಕ್ಷಣದ ಉನ್ನತೀಕರಣ ಸೇರಿದಂತೆ ಅವರ ದೂರದೃಷ್ಟಿಯ ನಾಯಕತ್ವದ ಜಾಗತಿಕ ಪರಿಣಾಮ, ಉದಾತ್ತತೆ ಕುರಿತಂತೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ ಎಂದು ಕಾರ್ನೆಲ್ ಯೂನಿವರ್ಸಿಟಿ ಕಾಲೇಜ್ ಆಫ್ ಆರ್ಕಿಟೆಕ್ಚರ್, ಆರ್ಟ್ ಮತ್ತು ಪ್ಲಾನಿಂಗ್‌ನ ಡೀನ್ ಜೆ. ಮೀಜಿನ್ ಯೂನ್ ಹೇಳಿದ್ದಾರೆ.

'ರತನ್ ಟಾಟಾ ಅವರ ಜೀವನ ಮತ್ತು ವೃತ್ತಿ ಜೀವನವನ್ನು ತಿರುಗಿ ನೋಡಿದರೆ, ಅವರು ನೀಡಿದ ಕೊಡುಗೆ ನೆನೆದು ಅವರ ಬಗ್ಗೆ ಕೇವಲ ಕೃತಜ್ಞತೆ ಮಾತ್ರವಲ್ಲ, ಭಾರತ ಮತ್ತು ವಿಶ್ವದಾದ್ಯಂತ ಜನರ ಜೀವನವನ್ನು ಸುಧಾರಿಸಿದ ಅವರ ಕರುಣೆ, ಉದಾರತೆ ಮತ್ತು ಅನನ್ಯ ಆಶಾವಾದವನ್ನು ಕಂಡು ಅತೀವ ಗೌರವ ಹುಟ್ಟುತ್ತಿದೆ ಎಂದು ಅಮೆರಿಕ ಲೋಕೋಪಕಾರಿ ಈರಾ ಡ್ರಕ್ಲರ್ ಹೇಳಿದ್ದಾರೆ.

‘ತಮ್ಮ ಕುಟುಂಬದ ವ್ಯಾಪಾರ ಸಮೂಹವಾದ ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಗುರುತಿಸಬಹುದಾದ ಬ್ರ್ಯಾಂಡ್‌ಗಳೊಂದಿಗೆ ಬಹುರಾಷ್ಟ್ರೀಯ ನಿಗಮವಾಗಿ ಪರಿವರ್ತಿಸಿದ ಭಾರತದ ಅತ್ಯಂತ ಶಕ್ತಿಯುತ ಮತ್ತು ಪೂಜ್ಯನೀಯ ಉದ್ಯಮಿಗಳೊಬ್ಬರಾದ ರತನ್ ಟಾಟಾ ಅವರು 86ನೇ ವಯಸ್ಸಿನಲ್ಲಿ ನಿಧನರಾದರು’ಎಂದು ನ್ಯೂಯಾರ್ಕ್ ಟೈಮ್ಸ್ ಬರೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.