ADVERTISEMENT

ವಿದೇಶ ವಿದ್ಯಮಾನ | ಅಮೆರಿಕ ಚುನಾವಣೆ ಕೌತುಕ

ವಲಸೆ ವಿರೋಧಿ ಡೊನಾಲ್ಡ್ ಟ್ರಂಪ್ ವಿರುದ್ಧ ವಲಸಿಗ ದಂಪತಿ ಮಗಳು ಕಮಲಾ ಹ್ಯಾರಿಸ್ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2024, 23:41 IST
Last Updated 4 ನವೆಂಬರ್ 2024, 23:41 IST
   

ಇಂದು (ನ.5) ಅಮೆರಿಕದ ಅಧ್ಯಕ್ಷೀಯ ಚುನಾವಣೆ. ವಿಶ್ವದ ‘ದೊಡ್ಡಣ್ಣ’ ಎನಿಸಿರುವ ಅಮೆರಿಕದ ಆಡಳಿತ ಚುಕ್ಕಾಣಿ ಹಿಡಿಯಲು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವಿನ ಹೋರಾಟ ಅಂತಿಮ ಘಟ್ಟ ತಲುಪಿದೆ. ಆಕ್ರಮಣಕಾರಿ ಸ್ವಭಾವದ ಟ್ರಂಪ್ ಎರಡನೇ ಬಾರಿಗೆ ಅಧ್ಯಕ್ಷರಾಗುವರೇ ಅಥವಾ ವರ್ಣೀಯ ಮಹಿಳೆ ಕಮಲಾ ಹ್ಯಾರಿಸ್ ಆಯ್ಕೆ ಆಗುವ ಮೂಲಕ ಅಮೆರಿಕದಲ್ಲಿ ಇತಿಹಾಸ ಸೃಷ್ಟಿಯಾಗುವುದೇ ಎನ್ನುವ ಕುತೂಹಲ ಮೂಡಿದೆ

2020ರಲ್ಲಿ ನಡೆದಿದ್ದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧ ಸೋಲು ಕಂಡಿದ್ದ ಡೊನಾಲ್ಡ್ ಟ್ರಂಪ್ ಅವರ ರಾಜಕೀಯ ಭವಿಷ್ಯ ಮುಗಿದೇಹೋಯಿತು ಎಂದೇ ಬಹುತೇಕರು ಭಾವಿಸಿದ್ದರು. ಆದರೆ, ಅಂಥವರ ನಿರೀಕ್ಷೆ ಹುಸಿಯಾಗಿದೆ. ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಲು ಮೂರನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಕಮಲಾ ಹ್ಯಾರಿಸ್ ವಿರುದ್ಧ ಜಿದ್ದಾಜಿದ್ದಿನ ಹೋರಾಟ ನಡೆಸಿದ್ದಾರೆ. ಇಬ್ಬರ ನಡುವೆ ಸಮಬಲದ ಹೋರಾಟ ಏರ್ಪಟ್ಟಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಅಂದಾಜಿಸಿವೆ.

ಟ್ರಂಪ್ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿವೆ. ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ ತಮ್ಮ ಕಂಪನಿಯಿಂದ ಹಣ ವರ್ಗಾಯಿಸಿದ್ದ ಪ್ರಕರಣದಲ್ಲಿ ಅವರು ದೋಷಿ ಎಂದು ನ್ಯಾಯಾಲಯ ಈಗಾಗಲೇ ತೀರ್ಪು ನೀಡಿದೆ. ಜತೆಗೆ ಚುನಾವಣಾ ಪ್ರಚಾರದ ವೇಳೆ ಎರಡು ಬಾರಿ ಅವರ ಹತ್ಯೆ ಯತ್ನ ನಡೆದಿದೆ. ಇಂಥ ಪ್ರತಿಕೂಲ  ಪರಿಸ್ಥಿತಿಯಲ್ಲಿಯೂ ಛಲ ಬಿಡದ ಟ್ರಂಪ್, ಗೆಲುವಿಗಾಗಿ ಸರ್ವಪ್ರಯತ್ನವನ್ನೂ ನಡೆಸಿದ್ದಾರೆ. ಟ್ರಂಪ್ ಹೋರಾಟ ಎಷ್ಟು ತೀವ್ರವಾಗಿತ್ತೆಂದರೆ, ಪ್ರತಿಸ್ಪರ್ಧಿಯಾಗಿದ್ದ ಜೋ ಬೈಡನ್ ದುರ್ಬಲ ಅನ್ನಿಸಿಕೊಂಡು ಕಣದಿಂದಲೇ ನಿರ್ಗಮಿಸಬೇಕಾಯಿತು. ಆಗ ಟ್ರಂಪ್‌ಗೆ ಎದುರಾಳಿಯಾಗಿ ಬಂದವರು ವಕೀಲರಾದ ಭಾರತ ಮೂಲದ ಕಮಲಾ ಹ್ಯಾರಿಸ್.

ADVERTISEMENT

ಟ್ರಂಪ್‌ ವಲಸೆ ವಿರೋಧಿ. ಕಮಲಾ ಹ್ಯಾರಿಸ್ ವಲಸಿಗ ದಂಪತಿಯ ಪುತ್ರಿ. ಅವರ ತಾಯಿ ಭಾರತ ಮೂಲದವರಾದರೆ, ತಂದೆ ಜಮೈಕಾ ಮೂಲದವರು. ಬ್ರಿಟನ್ನಿನ ಮಾಜಿ ಪ್ರಧಾನಿ ರಿಷಿ ಸುನಕ್ ಭಾರತದೊಂದಿಗಿನ ತಮ್ಮ ನಂಟನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಆದರೆ, ಕಮಲಾ ಅವರು ಆಫ್ರಿಕನ್ ಕೆರೀಬಿಯನ್ ಮೂಲದ ಬಗ್ಗೆ ಹೇಳಿಕೊಂಡಷ್ಟು ಭಾರತ ಮೂಲದ ಬಗ್ಗೆ ಹೇಳಿಕೊಂಡಿಲ್ಲ. ಆದರೂ ಅವರ ಭಾರತ ಮೂಲವನ್ನು ಉಲ್ಲೇಖಿಸಿ ಪ್ರಚಾರ ಮಾಡಲಾಗುತ್ತಿದೆ. 

ಈ ಬಾರಿಯ ಚುನಾವಣಾ ಅಖಾಡದಲ್ಲಿ ಹಲವು ವಿಚಾರಗಳು ಹೆಚ್ಚು ಚರ್ಚೆಗೆ ಒಳಗಾಗಿವೆ. ಹಣದುಬ್ಬರ, ವಲಸೆ ನೀತಿ, ವಿದೇಶಾಂಗ ನೀತಿ, ತೆರಿಗೆ, ಗರ್ಭಪಾತ ಚುನಾವಣೆ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ. ಇವುಗಳ ಜತೆಗೆ, ವ್ಯಾಪಾರ, ಹವಾಮಾನ, ಆರೋಗ್ಯ ಸೇವೆ, ಮಾದಕ ವಸ್ತು, ಬಂದೂಕು‌ ಕೂಡ ಮುಖ್ಯ ವಿಷಯಗಳಾಗಿವೆ. ಬಂದೂಕು, ಮಾದಕ ದ್ರವ್ಯದಂಥ ವಿಚಾರಗಳಲ್ಲಿ ‘ಜನಸ್ನೇಹಿ’ ನೀತಿ ಅನುಸರಿಸುವುದಾಗಿಯೂ, ಗರ್ಭಪಾತದಂಥ ವಿಚಾರದಲ್ಲಿ ನ್ಯಾಯಾಲಯದ ಆದೇಶ ಪಾಲಿಸುವುದಾಗಿಯೂ ಟ್ರಂಪ್ ಆಕ್ರಮಣಕಾರಿ ಶೈಲಿಯಲ್ಲಿ ತಮ್ಮ ಭರವಸೆಗಳನ್ನು ಮತದಾರರ ಮುಂದಿಟ್ಟಿದ್ದಾರೆ. ವಲಸೆ ವಿಚಾರದಲ್ಲಿ ಅವರ ಕಠಿಣ ನಿಲುವಿಗೆ ಅವರ ಹಿಂದಿನ ಆಡಳಿತವೇ ನಿದರ್ಶನವಾಗಿದೆ. ಕಮಲಾ ಅವರು ಗರ್ಭಪಾತದ ಹಕ್ಕಿನ ಪರವಾಗಿರುವುದು ಸೇರಿದಂತೆ ಮುಖ್ಯ ವಿಷಯಗಳಲ್ಲಿ ತಮ್ಮ ನಿಲುವುಗಳೇನು ಎನ್ನುವುದನ್ನು ಜನರ ಮುಂದಿಟ್ಟು ಮತ ಯಾಚನೆ ಮಾಡಿದ್ದಾರೆ. 

ಅಮೆರಿಕದಲ್ಲಿ 50 ರಾಜ್ಯಗಳಿದ್ದು, ಏಳು ರಾಜ್ಯಗಳ– ಅರಿಜೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ನೆವಾಡಾ, ಜಾರ್ಜಿಯಾ, ಮಿಷಿಗನ್ ಮತ್ತು ವಿಸ್ಕಾನ್‌ಸಿನ್‌– ಮತಗಳು ನಿರ್ಣಾಯಕವಾಗಿವೆ. ಟ್ರಂಪ್ ಮತ್ತು ಕಮಲಾ ಇಬ್ಬರೂ ಸಮಬಲದಿಂದ ಹೋರಾಟ ನಡೆಸಿದ್ದು, ಗೆಲುವಿಗಾಗಿ ಕೊನೆಯ ಹಂತದ ಕಸರತ್ತುಗಳಲ್ಲಿ ತೊಡಗಿದ್ದಾರೆ.  

ಜಗತ್ತಿನ ರಾಜಕೀಯ ಹಾಗೂ ಆರ್ಥಿಕ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುವ ‘ದೊಡ್ಡಣ್ಣ’ ಅಮೆರಿಕ. ಇಂಥ ದೊಡ್ಡಣ್ಣನ ಅಧಿಕಾರದ ಚುಕ್ಕಾಣಿ ಹಿಡಿಯುವ ಪ್ರತಿಷ್ಠೆಯ ಹೋರಾಟದಲ್ಲಿ ಅಂತಿಮವಾಗಿ ಯಾರ ಕೈ ಮೇಲಾಗಲಿದೆ ಎಂದು ಇಡೀ ವಿಶ್ವವೇ ಕಾತರದಿಂದ ನಿರೀಕ್ಷಿಸುತ್ತಿದೆ. ಚೀನಾದ ಆಕ್ರಮಣಕಾರಿ ಮನೋಭಾವ, ರಷ್ಯಾ–ಉಕ್ರೇನ್ ಸಂಘರ್ಷ, ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮುಂತಾದ ಕಾರಣಗಳಿಂದ ಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವುದು ಮಹತ್ವದ್ದೆನಿಸಿದೆ.

ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಮತ್ತು ಕಮಲಾ ಇಬ್ಬರಲ್ಲಿ ಯಾರೇ ಗೆದ್ದರೂ ಅದು ಐತಿಹಾಸಿಕವಾಗಲಿದೆ. ಎರಡು ಬಾರಿ ಸಂಸತ್ತಿನಲ್ಲಿ ವಾಗ್ದಂಡನೆಗೆ ಗುರಿಯಾಗಿರುವ, ನ್ಯಾಯಾಲಯದಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ, ಒಂದು ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾಗಿರುವ ಟ್ರಂಪ್ ಈ ಬಾರಿ (ಎರಡನೆಯ ಬಾರಿ) ಗೆದ್ದರೆ, ಅದು ದಾಖಲೆಯಾಗಲಿದೆ; ಅವರು ಸೋತು, ವರ್ಣೀಯರಾದ ಕಮಲಾ ಆಯ್ಕೆಯಾದರೆ, ಶ್ವೇತಭವನ ಪ್ರವೇಶಿಸುವ ಮೊದಲ ಮಹಿಳೆ ಎನ್ನುವ ಇತಿಹಾಸ ಸೃಷ್ಟಿಯಾಗಲಿದೆ. 

ಆಧಾರ ಪಿಟಿಐ, ಬಿಬಿಸಿ, ರಾಯಿಟರ್ಸ್‌, ಅಮೆರಿಕ ಸರ್ಕಾರದ ವೆಬ್‌ಸೈಟ್‌

ಅಮೆರಿಕ ಅಧ್ಯಕ್ಷರ ಆಯ್ಕೆ ಹೇಗೆ?

ಅಮೆರಿಕದ ಮತದಾರರು ಅಧ್ಯಕ್ಷರ ಆಯ್ಕೆಗಾಗಿ ಮತ ಹಾಕಿದರೂ ಅವರು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ. ಅಲ್ಲಿನ ಸಂವಿಧಾನದ ಪ್ರಕಾರ, ಪರೋಕ್ಷ ಮತದಾನದ ವ್ಯವಸ್ಥೆ ಅನುಸರಿಸಲಾಗುತ್ತದೆ. 

  • ಅಧ್ಯಕ್ಷರ ಚುನಾವಣೆಗೆ ಒಂದು ವರ್ಷವಿರುವಾಗಲೇ ಪ್ರಕ್ರಿಯೆ ಆರಂಭವಾಗುತ್ತದೆ

  • ಪಕ್ಷಗಳು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಇಲ್ಲೂ ಮತದಾನ ನಡೆಯುತ್ತದೆ. ಕೊನೆಯಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶ ಹಮ್ಮಿಕೊಂಡು ಒಬ್ಬ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಲಾಗುತ್ತದೆ 

  • ಅಧ್ಯಕ್ಷೀಯ ಅಭ್ಯರ್ಥಿಯು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ

  • ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಮೆರಿಕದ ಎಲ್ಲ ರಾಜ್ಯಗಳಿಗೆ ತೆರಳಿ ಪ್ರಚಾರ ನಡೆಸುತ್ತಾರೆ. ಸುದ್ದಿವಾಹಿನಿ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಾರೆ

  • ಮತದಾನದ ದಿನ ದೇಶದ ಮತದಾರರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ತಮ್ಮ ಹಕ್ಕು ಚಲಾಯಿಸುತ್ತಾರೆ (ಆನ್‌ಲೈನ್‌ ಮತಪತ್ರದ ಮೂಲಕ ಮತ್ತು ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವುದಕ್ಕೆ ಅವಕಾಶ ಇದೆ). ಪ್ರತಿ ಅಧ್ಯಕ್ಷೀಯ ಚುನಾವಣೆಯಲ್ಲೂ ನವೆಂಬರ್‌ ತಿಂಗಳ ಮೊದಲ ಮಂಗಳವಾರ ಮತದಾನ ನಡೆಯುತ್ತದೆ. 1845ರಲ್ಲಿ ನಡೆದ ಮೊದಲ ಅಧ್ಯಕ್ಷೀಯ ಚುನಾವಣೆಯಿಂದಲೇ ಈ ಸಂಪ್ರದಾಯ ಚಾಲ್ತಿಯಲ್ಲಿದೆ

  • ಮತದಾರರು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮತದಾನ ಮಾಡಿದರೂ ಅಂತಿಮವಾಗಿ ಇಬ್ಬರನ್ನೂ ಆಯ್ಕೆ ಮಾಡುವುದು ಎಲೆಕ್ಟರಲ್‌ಗಳು (ಜನಪ್ರತಿನಿಧಿಗಳು). ಈ ವ್ಯವಸ್ಥೆಯನ್ನು ಎಲೆಕ್ಟರಲ್‌ ಕಾಲೇಜ್‌ (ಚುನಾಯಕರ ಕೂಟ) ಎಂದು ಕರೆಯಲಾಗುತ್ತದೆ. ಅಮೆರಿಕದ ಕಾಂಗ್ರೆಸ್‌ನಲ್ಲಿ ಪ್ರತಿರಾಜ್ಯ ಹೊಂದಿರುವ ಪ್ರಾತಿನಿಧ್ಯದ ಆಧಾರದ ಮೇಲೆ ಪ್ರತೀ ರಾಜ್ಯಗಳ ಎಲೆಕ್ಟರ್‌ಗಳ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಪ್ರಸ್ತುತ ಎಲೆಕ್ಟರ್‌ಗಳ ಸಂಖ್ಯೆ 538 ಇದೆ     

  • ಡಿಸೆಂಬರ್‌ ಮೂರನೇ ವಾರದಲ್ಲಿ ಎಲೆಕ್ಟರ್‌ಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಮತದಾನ ಮಾಡುತ್ತಾರೆ. ಅಮೆರಿಕದ ಅಧ್ಯಕ್ಷರಾಗಲು ಕನಿಷ್ಠ 270 ಎಲೆಕ್ಟರ್‌ಗಳ ಬೆಂಬಲ ಬೇಕು (ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಚುನಾವಣೆಯಲ್ಲಿ ನಿರ್ದಿಷ್ಟ ಅಭ್ಯರ್ಥಿ ಪರವಾಗಿ ಹೆಚ್ಚು ಮತಗಳು ಬಂದರೂ ಅವರು ಅಧ್ಯಕ್ಷರಾಗುವುದಿಲ್ಲ. ಎಲೆಕ್ಟರ್‌ಗಳ ಮತಗಳಿಂದಷ್ಟೇ ಅವರು ಆಯ್ಕೆಯಾಗುತ್ತಾರೆ)

  • ಜನವರಿ 20ರಂದು ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಾರೆ

  • ಒಬ್ಬ ವ್ಯಕ್ತಿ ಗರಿಷ್ಠ ಎರಡು ಬಾರಿ ಅಧ್ಯಕ್ಷರಾಗುವುದಕ್ಕೆ ಅವಕಾಶ ಇದೆ

ಕಣದಲ್ಲಿ ಐವರು
ಈ ಸಲದ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ (60 ವರ್ಷ) ಮತ್ತು ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (78 ವರ್ಷ) ನಡುವೆ ನೇರ ಹಣಾಹಣಿ ಇದ್ದರೂ, ಅಧ್ಯಕ್ಷೀಯ ಹುದ್ದೆಯ ಸ್ಪರ್ಧೆಯಲ್ಲಿ ಇನ್ನೂ ಮೂವರು ಅಭ್ಯರ್ಥಿಗಳಿದ್ದಾರೆ. ಲಿಬರ್ಟೇರಿಯನ್‌ ಪಾರ್ಟಿಯಿಂದ ಚೇಸ್‌ ಒಲಿವರ್‌ (39 ವರ್ಷ) ಮತ್ತು ಗ್ರೀನ್‌ ಪಾರ್ಟಿಯಿಂದ ಜಿಲ್‌ ಸ್ಟೇನ್‌ (74 ವರ್ಷ) ಕಣಕ್ಕಿಳಿಸಿದ್ದಾರೆ. ಈ ಹಿಂದೆ ಗ್ರೀನ್‌ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ಕಾರ್ನೆಲ್‌ ವೆಸ್ಟ್‌ (71 ವರ್ಷ) ಅವರು ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.
ಬಂಗಾಳಿ ಭಾಷೆಯಲ್ಲೂ ಮತಪತ್ರ
ನ್ಯೂಯಾರ್ಕ್‌ನಲ್ಲಿ ನಡೆಯುವ ಮತದಾನದಲ್ಲಿ ಬಳಸಲಾಗುತ್ತಿರುವ ಮತಪತ್ರಗಳಲ್ಲಿ ಬಂಗಾಳಿ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಲಾಗುತ್ತದೆ. ಇಂಗ್ಲಿಷ್‌, ಬಂಗಾಳಿ ಮಾತ್ರವಲ್ಲದೆ ಚೀನಿ, ಸ್ಪ್ಯಾನಿಶ್‌ ಮತ್ತು ಕೊರಿಯಾ ಭಾಷೆಗಳಲ್ಲೂ ಮತಪತ್ರಗಳನ್ನು ಮುದ್ರಿಸಲಾಗುತ್ತದೆ. ಅದು ಕಾನೂನು ಪ್ರಕಾರ ತೆಗೆದುಕೊಳ್ಳುತ್ತಿರುವ ಅನಿವಾರ್ಯ ಕ್ರಮವಾಗಿದೆ. ಕಾನೂನಿನ ಪ್ರಕಾರ, ನ್ಯೂಯಾರ್ಕ್‌ ಸಿಟಿಯ ಕೆಲವು ಕಡೆಗಳಲ್ಲಿ ಬಂಗಾಳಿ ಭಾಷೆಯಲ್ಲಿ ಮತಪತ್ರಗಳನ್ನು ಮುದ್ರಿಸುವುದು ಕಡ್ಡಾಯ. ಮತಪತ್ರ ಮಾತ್ರವಲ್ಲ, ಬಂಗಾಳಿ ಮಾತನಾಡುವ ಮತದಾರರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಇತರೆ ಚುನಾವಣಾ ಪರಿಕರಗಳಲ್ಲೂ ಬಂಗಾಳಿಯಲ್ಲಿ ವಿವರ ಇರಬೇಕಾಗಿದೆ. ಭಾರತದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವ ಬಗ್ಗೆ ಈ ಹಿಂದೆ ಕಾನೂನು ಹೋರಾಟ ನಡೆದಿತ್ತು. ಅಂತಿಮವಾಗಿ ಬಂಗಾಳಿ ಭಾಷೆಯನ್ನು ಆಯ್ಕೆ ಮಾಡಲಾಗಿತ್ತು. 2013ರಿಂದ ಮತಪತ್ರದಲ್ಲಿ ಬಂಗಾಳಿಯನ್ನೂ ಬಳಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.