ADVERTISEMENT

ಟ್ರಂಪ್‌ಗೆ ಮತ್ತೆ ಅಮೆರಿಕ ಪಟ್ಟ; ಉಪಾಧ್ಯಕ್ಷೆ ಹ್ಯಾರಿಸ್‌ಗೆ ನಿರಾಸೆ

ಶ್ವೇತಭವನದ ಗದ್ದುಗೆಯನ್ನು 2ನೇ ಬಾರಿಗೆ ಹಿಡಿದ ಹಿರಿಯ ನಾಯಕ;

ಪಿಟಿಐ
Published 7 ನವೆಂಬರ್ 2024, 0:05 IST
Last Updated 7 ನವೆಂಬರ್ 2024, 0:05 IST
   

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅಭೂತಪೂರ್ವ ಜಯ ಗಳಿಸಿದ್ದು 47ನೇ ಅಧ್ಯಕ್ಷರಾಗುವುದು ಖಚಿತವಾಗಿದೆ. ಬುಧವಾರ ಮತ ಎಣಿಕೆ ನಡೆದಿದ್ದು ಗೆಲುವಿಗೆ ಅಗತ್ಯವಿರುವ 270 ಎಲೆಕ್ಟರ್‌ಗಳ ಬೆಂಬಲವನ್ನು ಪಡೆಯುವಲ್ಲಿ ಟ್ರಂಪ್‌ ಯಶಸ್ವಿಯಾಗಿದ್ದಾರೆ. 

ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ವಿಶ್ವದ ಬಲಾಢ್ಯ ರಾಷ್ಟ್ರವಾಗಿರುವ ಅಮೆರಿಕದ ಚುಕ್ಕಾಣಿಯನ್ನು 78ರ ಹರೆಯದ ಟ್ರಂಪ್‌ ಎರಡನೇ ಬಾರಿಗೆ ಹಿಡಿಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಟ್ರಂಪ್‌ ಅವರ ಈ ಗೆಲುವನ್ನು ಅಮೆರಿಕದ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಪುನರಾಗಮನವೆಂದು ವಿಶ್ಲೇಷಿಸಲಾಗುತ್ತಿದೆ.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಏರ್ಪಟ್ಟಿದ್ದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ತಮ್ಮ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಹಾಲಿ ಉಪಾಧ್ಯಕ್ಷೆ, ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಎದುರು ಟ್ರಂಪ್‌ ಗೆಲುವಿನ ನಗೆ ಬೀರಿದ್ದಾರೆ. ಟ್ರಂಪ್‌ಗೆ 280 ಎಲೆಕ್ಟರ್‌ಗಳು ಹಾಗೂ ಕಮಲಾ ಅವರಿಗೆ 224 ಎಲೆಕ್ಟರ್‌ಗಳ ಬೆಂಬಲ ದೊರೆತಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್‌ಗಳ ಪೈಕಿ 270 ಎಲೆಕ್ಟರ್‌ಗಳ ಬೆಂಬಲದ ಅಗತ್ಯವಿತ್ತು. 

ADVERTISEMENT

2016ರಲ್ಲಿ ಹಿಲರಿ ಕ್ಲಿಂಟನ್‌ ವಿರುದ್ಧ ಗೆಲುವು ಸಾಧಿಸಿ 45ನೇ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ಟ್ರಂಪ್‌, 2020ರ ಚುನಾವಣೆಯಲ್ಲಿ ಜೋ ಬೈಡನ್‌ ಎದುರು ಪರಾಭವಗೊಂಡಿದ್ದರು.

50 ರಾಜ್ಯಗಳ ಪೈಕಿ ಚುನಾವಣಾ ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕವಾಗಿದ್ದ ರಾಜ್ಯಗಳಲ್ಲಿ ಫ್ಲಾರಿಡಾ, ಇಂಡಿಯಾನಾ, ಕೆಂಟುಕಿ ಸೇರಿದಂತೆ 9 ರಾಜ್ಯಗಳಲ್ಲಿ ಟ್ರಂಪ್‌ ಗೆಲುವು ಸಾಧಿಸಿದರೆ, ಕಮಲಾ ಹ್ಯಾರಿಸ್‌ ಅವರಿಗೆ ನ್ಯೂಯಾರ್ಕ್‌, ವರ್ಮೊಂಟ್‌ ಸೇರಿ 5 ರಾಜ್ಯಗಳಲ್ಲಿ ಗೆಲುವು ದಕ್ಕಿತು. 

ಪೆನ್ಸಿಲ್ವೇನಿಯಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾ ರಾಜ್ಯಗಳಲ್ಲೂ ಟ್ರಂಪ್ ಗೆಲುವಿನ ಹತ್ತಿರದಲ್ಲಿದ್ದು, ಅರಿಜೋನಾ, ಮಿಷಿಗನ್, ವಿಸ್ಕಾನ್ಸಿನ್ ಮತ್ತು ನೆವಾಡಾದಲ್ಲಿ ಮತ ಎಣಿಕೆ ಕಾರ್ಯ ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಮುಂದುವರಿದಿತ್ತು. 

ಮತ ಎಣಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಟ್ರಂಪ್‌ ಅವರು ಮುನ್ನಡೆ ಪಡೆದರು. ಇದರಿಂದ ನಿರಾಶೆಗೊಂಡ ಕಮಲಾ ಹ್ಯಾರಿಸ್‌ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆಸಬೇಕಿದ್ದ ರ‍್ಯಾಲಿಯನ್ನು ರದ್ದುಪಡಿಸಿದರು.

ಕಮಲಾ ಹ್ಯಾರಿಸ್‌ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ ಮೊದಲ ಮಹಿಳೆ, ಮೊದಲ ಕಪ್ಪು ವರ್ಣೀಯ ಮಹಿಳೆ ಹಾಗೂ ಏಷ್ಯಾ ಮೂಲದ ಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೆ ಪಾತ್ರರಾಗುತ್ತಿದ್ದರು. 

ಅಮೆರಿಕದ ಸುವರ್ಣ ಯುಗ ಆರಂಭ: ಟ್ರಂಪ್‌

‘ಅಭೂತಪೂರ್ವ ಹಾಗೂ ಸಂಪೂರ್ಣ ಬೆಂಬಲವನ್ನು ಅಮೆರಿಕ ನೀಡಿದೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ. ಇನ್ನು ಅಮೆರಿಕದಲ್ಲಿ ಸುವರ್ಣ ಯುಗ ಆರಂಭವಾಗಲಿದೆ’ ಎಂದು ಟ್ರಂಪ್‌ ಹೇಳಿದರು. 

ವಿಜಯದ ಸ್ಪಷ್ಟ ಸೂಚನೆಗಳು ಸಿಗುತ್ತಿದ್ದಂತೆ ಫ್ಲಾರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ತಮ್ಮ ಕುಟುಂಬದ ಜತೆಗೆ ಬುಧವಾರ ಬೆಂಬಲಿಗರನ್ನು ಉದ್ದೇಶಿಸಿ ಟ್ರಂಪ್‌ ವಿಜಯದ ಭಾಷಣ ಮಾಡಿದರು. ‘ಇದು ಅಮೆರಿಕದ ಜನರ ಭವ್ಯ ವಿಜಯ. ಇದು ಹಿಂದೆಂದೂ ಯಾರೂ ನೋಡದಂತಹ ರಾಜಕೀಯ ಆಂದೋಲನವಾಗಿದೆ. ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳವಳಿ ಎಂದೇ ನಾನು ಭಾವಿಸುತ್ತೇನೆ. ಜನತೆ ನೀಡಿರುವ ಅಭೂತಪೂರ್ವ ಬೆಂಬಲ, ಈ ಗೆಲುವು ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ಸಹಕಾರಿಯಾಗಿದೆ’ ಎಂದು ಹೇಳಿದರು.

‘ನನ್ನನ್ನು ದೇವರು ಬದುಕುಳಿಸಿದ್ದು ಈ ದೇಶವನ್ನು ರಕ್ಷಿಸಲು ಹಾಗೂ ಅಮೆರಿಕದ ಹಿರಿಮೆಯನ್ನು ಕಾಪಾಡುವ ಸಲುವಾಗಿಯೇ ಇರಬೇಕು’ ಎಂದು ಬಣ್ಣಿಸಿದ ಟ್ರಂಪ್‌, ಚುನಾವಣಾ ಪ್ರಚಾರದ ವೇಳೆ ಬಂದೂಕುಧಾರಿಗಳು ತಮ್ಮ ಹತ್ಯೆಗೆ ನಡೆಸಿದ ಗುಂಡಿನ ದಾಳಿಯನ್ನು ಪರೋಕ್ಷವಾಗಿ ನೆನಪಿಸಿಕೊಂಡರು.

‘ರಾಜಕೀಯ ವಲಯದಲ್ಲಿ ಇದು ಯಾರೂ ನಿರೀಕ್ಷಿಸದ ವಿದ್ಯಮಾನ. ಇದನ್ನು ಯಾರೂ ಊಹಿಸಿರಲಿಲ್ಲ. ನಮ್ಮ ದೇಶದ ಸದ್ಯದ ಪರಿಸ್ಥಿತಿಯನ್ನು ಸರಿಪಡಿಸಲು ನೆರವಿನ ಅಗತ್ಯವಿದೆ. ಅದಕ್ಕೆ ನಾವೆಲ್ಲರೂ ನೆರವಾಗಬೇಕಿದೆ. ನಮ್ಮ ರಾಷ್ಟ್ರದ ಗಡಿಯನ್ನು ಭದ್ರಪಡಿಸಲಾಗುವುದು. ಅಷ್ಟೇ ಅಲ್ಲ, ದೇಶಕ್ಕೆ ಸಂಬಂಧಿಸಿದ ಎಲ್ಲವನ್ನೂ ಸರಿಪಡಿಸಲಾಗುವುದು. ನೀವು, ನಿಮ್ಮ ಕುಟುಂಬ ಹಾಗೂ ನಿಮ್ಮ ಭವಿಷ್ಯದ ಪ್ರತಿಯೊಂದು ದಿನವೂ ಸುರಕ್ಷಿತವಾಗಿಡಲು ನನ್ನ ದೇಹದಲ್ಲಿ ಕೊನೆ ಉಸಿರು ಇರುವವರೆಗೂ ಹೋರಾಡುವೆ. ಅಮೆರಿಕದ ಮಕ್ಕಳು ಹಾಗೂ ಪ್ರತಿಯೊಬ್ಬರು ಅದ್ಭುತ ಜೀವನ ನಡೆಸಲು ಅಗತ್ಯವಿರುವುದನ್ನು ಸ್ಥಾಪಿಸದ ಹೊರತು ನಾನು ವಿರಮಿಸುವುದಿಲ್ಲ’ ಎಂದು ಟ್ರಂಪ್‌ ಭರವಸೆ ನೀಡಿದರು.

ಅಭ್ಯರ್ಥಿಯೊಬ್ಬರು ಒಮ್ಮೆ ಸೋತು, ಮತ್ತೊಂದು ಅವಧಿಗೆ ಸ್ಪರ್ಧಿಸಿ ಗೆದ್ದ ಇತಿಹಾಸ 132 ವರ್ಷಗಳಿಂದ ಅಮೆರಿಕದಲ್ಲಿ ಇರಲಿಲ್ಲ ಅಧ್ಯಕ್ಷ ಗಾದಿಗೆ ಇದುವರೆಗೆ ಏರಿದವರಲ್ಲಿ ಅತ್ಯಂತ ಹಿರಿಯ ನಾಯಕ ಎನ್ನುವ ಶ್ರೇಯ ಟ್ರಂಪ್‌ಗೆ ಗಂಭೀರ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥನಾದ ವ್ಯಕ್ತಿಗೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ
ಸ್ನೇಹಿತ ಟ್ರಂಪ್‌ ಅವರಿಗೆ ಅಭಿನಂದನೆ. ನಮ್ಮ ಜನರಿಗಾಗಿ, ಜಾಗತಿಕ ಶಾಂತಿ, ಸಮೃದ್ಧಿ, ದೃಢತೆಗಾಗಿ ಒಟ್ಟಾಗಿ ಕೆಲಸ ಮಾಡೋಣ
ನರೇಂದ್ರ ಮೋದಿ, ಭಾರತದ ಪ್ರಧಾನಿ
ಜಾಗತಿಕ ಶಾಂತಿ ಮತ್ತು ಸಮೃದ್ಧಿಗಾಗಿ ನಾವು ಅಮೆರಿಕದ ಜತೆಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ
ಮಲ್ಲಿಕಾರ್ಜುನ ಖರ್ಗೆ,

ಟ್ರಂಪ್‌ ಗೆಲುವಿಗೆ ಪೂರಕವಾಗಿದ್ದೇನು?

* ಹಲವು ವಿವಾದ, ಕ್ರಿಮಿನಲ್‌ ಪ್ರಕರಣಗಳಿಂದ ನ್ಯಾಯಾಲಯದ ಕಟಕಟೆ ಹತ್ತಿ ರಾಜಕೀಯ ವನವಾಸ ಅನುಭವಿಸಿದರೂ ಮಾರ್ಚ್‌ನಲ್ಲೇ ತಮ್ಮ ಪಕ್ಷದಿಂದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಇದರ ಬೆನ್ನಲ್ಲೇ ನಡೆಸಿದ ಬಿರುಸಿನ ಚುನಾವಣಾ ತಯಾರಿ

 * ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶಕ್ಕೆ ಕೆಲವೇ ದಿನಗಳ ಮೊದಲು ಜುಲೈನಲ್ಲಿ ಪೆನ್ಸಿಲ್ವೇನಿಯಾದಲ್ಲಿ ನಡೆದ ರ‍್ಯಾಲಿ ವೇಳೆ ಟ್ರಂಪ್ ಮೇಲೆ ಗುಂಡಿನ ದಾಳಿಯಾಯಿತು. ಅವರ ಕಿವಿಗೆ ಗುಂಡು ತಗುಲಿ ರಕ್ತ ಸುರಿಯುತ್ತಿದ್ದರೂ ಅಂಜದೆ ತನ್ನ ಮುಷ್ಟಿ ಎತ್ತಿದರು. ಇದು ಅವರ ಕಡು ಬೆಂಬಲಿಗರನ್ನು ಸಾಕಷ್ಟು ಭಾವನಾತ್ಮಕವಾಗಿ ಸೆಳೆಯಿತು. ಫ್ಲಾರಿಡಾದಲ್ಲಿ ಟ್ರಂಪ್‌ ಮೇಲೆ ಎರಡನೇ ಬಾರಿ ನಡೆದ ಗುಂಡಿನ ದಾಳಿಯೂ ಟ್ರಂಪ್‌ ಕಡೆಗೆ ಮತದಾರರು ವಾಲುವಂತೆ ಮಾಡಿತು

* ಅಕ್ರಮ ವಲಸಿಗರು ನುಸುಳದಂತೆ ದೇಶದ ಗಡಿಯನ್ನು ಭದ್ರಪಡಿಸುವ, ಗರ್ಭಪಾತವನ್ನು ಬೆಂಬಲಿಸುವ, ‘ಅಮೆರಿಕವೇ ಮೊದಲು’ ಕಾರ್ಯಸೂಚಿ ಜಾರಿಗೊಳಿಸುವ, ಎಚ್‌1–ಬಿ ವೀಸಾ ನಿಯಮ ಬಿಗೊಳಿಸುವ ಟ್ರಂಪ್‌ ಭರವಸೆಗಳು ಮತದಾರರ ಮೇಲೆ ಪ್ರಭಾವ ಬೀರಿದವು 

* ಬೈಡನ್ ಮತ್ತು ಹ್ಯಾರಿಸ್‌ ಅವರ ಪ್ರತಿ ಟೀಕೆ, ಆರೋಪಕ್ಕೂ ಟ್ರಂಪ್‌ ತಕ್ಕ ಉತ್ತರ ನೀಡಿ ಮತದಾರರ ಮನ ಗೆದ್ದರು. ಬೈಡನ್‌ ಆಡಳಿತ ವೈಫಲ್ಯಗಳನ್ನು ಮತ್ತು ಹ್ಯಾರಿಸ್‌ ಅವರ ದೌರ್ಬಲ್ಯಗಳನ್ನು ಮತದಾರರಿಗೆ ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಟ್ಟರು

*ತಮ್ಮ ಚುನಾವಣಾ ರ‍್ಯಾಲಿಯಲ್ಲಿ ಟ್ರಂಪ್‌ ಪ್ರಚಾರ ಮಾಡಿದ ‘ಮೇಕ್‌ ಅಮೆರಿಕ ಗ್ರೇಟ್‌ ಅಗೇನ್‌’ ಘೋಷಣೆ ಮತ ಬುಟ್ಟಿಯನ್ನು ಭದ್ರಮಾಡಿತು

ಕಮಲಾ ಸೋಲಿಗೆ ಪ್ರಮುಖ ಕಾರಣಗಳು

* ಮೊದಲನೆಯದಾಗಿ, ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಹ್ಯಾರಿಸ್ ಅವರ ನಾಮನಿರ್ದೇಶನ ವಿಳಂಬವಾಯಿತು; ನಾಮನಿರ್ದೇಶನ ಕೂಡ ಪಕ್ಷದೊಳಗಿನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಆಗಿರಲಿಲ್ಲ. ಅಲ್ಲದೆ, ಪಕ್ಷದಲ್ಲಿ ಅತ್ಯಂತ ಜನಪ್ರಿಯ ನಾಯಕಿ ಎನಿಸಿರಲಿಲ್ಲ

*  ಎರಡನೆಯದಾಗಿ, ಜೋ ಬೈಡನ್ ಆಡಳಿತದ ಛಾಯೆಯಿಂದ ಹೊರಬರಲು ಹ್ಯಾರಿಸ್‌ಗೆ ಸಾಧ್ಯವಾಗಲಿಲ್ಲ. ಬೈಡನ್‌ ಆಡಳಿತಕ್ಕೆ ಜನಪ್ರಿಯತೆ ಇರಲಿಲ್ಲ. ಬೈಡನ್‌ ಆಡಳಿತಕ್ಕೆ ಅನುಮೋದನೆ ರೇಟಿಂಗ್ ಶೇ -15 ಇತ್ತು. ಅಲ್ಲದೆ, ಶೇ 36ರಷ್ಟು ಜನರು ದೇಶವು ತಪ್ಪು ಹಾದಿಯಲ್ಲಿದೆ ಎಂದು ನಂಬಿದ್ದರು 

* ಮೂರನೆಯದಾಗಿ, ಮತದಾರರು ಅಕ್ರಮ ವಲಸೆಯ ಬಗ್ಗೆ ಕಳವಳ ಹೊಂದಿದ್ದರು. ಹ್ಯಾರಿಸ್‌ ಅಕ್ರಮ ವಲಸಿಗರ ಪರವಿದ್ದಾರೆ. ಅಕ್ರಮ ವಲಸೆ ತಡೆಯುವಲ್ಲಿ ಬೈಡನ್‌ ಆಡಳಿತ ವಿಫಲವಾಗುವಲ್ಲಿ ಹ್ಯಾರಿಸ್‌ ಕೂಡ ಕಾರಣವೆಂದು ಟ್ರಂಪ್‌ ಮಾಡಿದ ಟೀಕೆ ಮತದಾರರ ಮನಸ್ಸಿನಲ್ಲಿ ನಾಟಿತು

* ಅಮೆರಿಕದ ಜನರು ಇನ್ನೂ ಮಹಿಳೆಯನ್ನು ಅಧ್ಯಕ್ಷೆಯಾಗಿ ಸ್ವೀಕರಿಸಲು ಸಿದ್ಧರಿಲ್ಲ. ಅದರಲ್ಲೂ ತಮ್ಮ ಅಧ್ಯಕ್ಷರಾಗಿ ಮತ್ತು ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಯ ಮುಖಸ್ಥೆಯಾಗಿ ಕಪ್ಪು ವರ್ಣೀಯ ಮಹಿಳೆಯನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇದ್ದಂತಿಲ್ಲ

ಮೋದಿ ಸೇರಿ ಹಲವು ನಾಯಕರ ಅಭಿನಂದನೆ

ಡೊನಾಲ್ಡ್‌ ಟ್ರಂಪ್‌ ಗೆಲುವಿಗೆ ವಿಶ್ವನಾಯಕರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.  

ಟ್ರಂಪ್‌ ಗೆಲುವಿಗೆ ಅಭಿನಂದಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಅಮೆರಿಕ ನಡುವಿನ ಜಾಗತಿಕ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

2016–2020ರ ಅವಧಿಯಲ್ಲಿ ಟ್ರಂಪ್‌ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಅವರನ್ನು ಭೇಟಿಯಾದಾಗಿನ ಚಿತ್ರವನ್ನು ಮೋದಿ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.

ಟ್ರಂಪ್‌ ಅವರ ಗೆಲುವನ್ನು ಸಂಭ್ರಮಿಸಿರುವ ಅವರ ಬೆಂಬಲಿಗ ಮತ್ತು ವಿಶ್ವದ ಸಿರಿವಂತ ಉದ್ಯಮಿ ಇಲಾನ್‌ ಮಸ್ಕ್‌ ‘ಅಮೆರಿಕವು ನಿರ್ಮಾಣ ಮಾಡುವವರಿಂದ ಕೂಡಿದ ರಾಷ್ಟ್ರ. ಶೀಘ್ರದಲ್ಲೇ, ನೀವು ನಿರ್ಮಾಣದಲ್ಲಿ ತೊಡಗಿಕೊಳ್ಳಲು ಮುಕ್ತರಾಗುತ್ತೀರಿ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಅವರು ಟ್ರಂಪ್‌ ಮುನ್ನಡೆಯಲ್ಲಿರುವಾಗಲೇ, ‘ಗೇಮ್‌, ಸೆಟ್‌ ಅಂಡ್‌ ಮ್ಯಾಚ್‌’ ಎಂದು ಟೆನಿಸ್‌ ಆಟದ ಭಾಷೆಯಲ್ಲಿ ಮಸ್ಕ್‌ ಅವರು ಪೋಸ್ಟ್‌ ಮಾಡಿದ್ದರು.

ಐತಿಹಾಸಿಕ ಸ್ನೇಹ ಹೊಂದಿರುವ ಇಟಲಿ ಮತ್ತು ಅಮೆರಿಕ ಸೋದರ ರಾಷ್ಟ್ರಗಳಾಗಿವೆ. ಕಾರ್ಯತಂತ್ರದ ಬಂಧ ಇನ್ನಷ್ಟು ಬಲವಾಗುವ ನಂಬಿಕೆ ಇದೆ
–ಜಾರ್ಜಿಯಾ ಮೆಲೋನಿ, ಇಟಲಿ ಪ್ರಧಾನಿ
ಪರಸ್ಪರ ಗೌರವ, ಸಹಕಾರ, ಶಾಂತಿಯುತ ಸಹಬಾಳ್ವೆಗಾಗಿ ಚೀನಾ ಅಮೆರಿಕದ ಜತೆಗೆ ಒಟ್ಟಾಗಿ ಕೆಲಸ ಮಾಡಲಿದೆ
–ವಿದೇಶಾಂಗ ಸಚಿವಾಲಯ, ಚೀನಾ
ನಾಲ್ಕು ವರ್ಷಗಳ ಕಾಲ ನಾವು ಗೌರವ, ಮಹತ್ವಕಾಂಕ್ಷೆಯೊಂದಿಗೆ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಸಿದ್ಧರಿದ್ಧೇವೆ
–ಇಮ್ಯಾನುಯೆಲ್‌ ಮ್ಯಾಕ್ರಾನ್‌, ಫ್ರಾನ್ಸ್ ಅಧ್ಯಕ್ಷ
ಅಮೆರಿಕ ಮತ್ತು ಬ್ರಿಟನ್‌ ನಡುವೆ ವಿಶೇಷ ಬಾಂಧವ್ಯವಿದೆ. ಅಮೆರಿಕದೊಂದಿಗಿನ ಸಂಬಂಧ ಟ್ರಂಪ್‌ ಅವಧಿಯಲ್ಲೂ ಮುಂದುವರಿಯಲಿದೆ
– ಸರ್‌ ಕೀರ್‌ ಸ್ಟಾರ್ಮರ್‌, ಬ್ರಿಟನ್‌ ಪ್ರಧಾನಿ
ಶ್ವೇತಭವನಕ್ಕೆ ನಿಮ್ಮ ಐತಿಹಾಸಿಕ ವಾಪಸಾತಿಯು ಅಮೆರಿಕಕ್ಕೆ ಹೊಸ ಆರಂಭ ನೀಡುತ್ತದೆ. ಇಸ್ರೇಲ್ ಮತ್ತು ಅಮೆರಿಕದ ನಡುವಿನ ಮಹಾನ್ ಮೈತ್ರಿಗೆ ಬದ್ಧತೆ ನೀಡುತ್ತದೆ
–ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ
ಟ್ರಂಪ್ ಅವರನ್ನು ಖುದ್ದು ಅಭಿನಂದಿಸಲು ಮತ್ತು ಅಮೆರಿಕದ ಜತೆಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆ ಬಲಪಡಿಸುವ ಬಗ್ಗೆ ಚರ್ಚಿಸಲು ಎದುರು ನೋಡುತ್ತಿದ್ದೇನೆ
–ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.