‘ಜಗತ್ತಿನ ದೊಡ್ಡಣ್ಣ’ ಎನಿಸಿದ ಅಮೆರಿಕ, ಹಲವು ರಾಷ್ಟ್ರಗಳಲ್ಲಿ ತನ್ನ ಸೇನಾ ನೆಲೆಗಳನ್ನು ಹೊಂದಿದ್ದು, ಆ ದೇಶದ ಲಕ್ಷಾಂತರ ಸೈನಿಕರು ತವರಿನಿಂದ ಹೊರಗಡೆಯೇ ಸೇವೆ ಸಲ್ಲಿಸುತ್ತಿದ್ದಾರೆ. ಅದರಲ್ಲೂ ಏಷ್ಯಾದ ಜಪಾನ್, ದಕ್ಷಿಣ ಕೊರಿಯಾ ಮತ್ತು ಯುರೋಪ್‌ನ ಜರ್ಮನಿಯಲ್ಲಿ ಅದರ ಸೈನಿಕರ ಸಂಖ್ಯೆ ತುಂಬಾ ದೊಡ್ಡ ಸಂಖ್ಯೆಯಲ್ಲಿದೆ. ಕೊರೊನಾ ನಂತರದ ಕಾಲಘಟ್ಟದಲ್ಲಿ ಅಮೆರಿಕ–ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಚೀನಾದಿಂದ ಆತಂಕ ಎದುರಿಸುತ್ತಿರುವ ದೇಶಗಳತ್ತ ‘ದೊಡ್ಡಣ್ಣ’ನ ಕಣ್ಣು ನೆಟ್ಟಿದೆ. ಅಮೆರಿಕದ ಈ ಹೆಜ್ಜೆಯು ಅದರ ವ್ಯೂಹಾತ್ಮಕ ತಂತ್ರದ ಭಾಗವಾಗಿದೆ.
ಚೀನಾದಿಂದ ಅಪಾಯ ಎದುರಿಸುತ್ತಿರುವ ಭಾರತ, ಮಲೇಷ್ಯಾ, ಇಂಡೋನೇಷ್ಯಾ, ಫಿಲಿಪ್ಪೀನ್ಸ್, ವಿಯೇಟ್ನಾಂ ಮೊದಲಾದ ದೇಶಗಳಿಗೆ ನೆರವಾಗುವಂತೆ ತನ್ನ ಸೇನೆಯನ್ನು ಮರು ನಿಯೋಜನೆ ಮಾಡುವುದಾಗಿ ಅಮೆರಿಕ ಪ್ರಕಟಿಸಿದೆ. ಜರ್ಮನಿಯಲ್ಲಿ ಸದ್ಯ 52 ಸಾವಿರ ಅಮೆರಿಕ ಸೈನಿಕರಿದ್ದು, ಆ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿ, ಏಷ್ಯಾದ ಬೇರೆ ನೆಲೆಗಳಿಗೆ ಕಳಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಾಹಿತಿ ನೀಡಿದ್ದಾರೆ. ಜಗತ್ತಿನ ವಿವಿಧ ದೇಶಗಳಲ್ಲಿ ಅಮೆರಿಕ ಸೇನಾ ಉಪಸ್ಥಿತಿಯ ಪುಟ್ಟ ನೋಟ ಇಲ್ಲಿದೆ..
ಚೀನಾದ ಸವಾಲನ್ನು ಸಮರ್ಥವಾಗಿ ಎದುರಿಸಲು ಅಮೆರಿಕವು ತನ್ನ ಗುವಾಮ್‌ನ ಆ್ಯಂಡರ್ಸನ್ ವಾಯುನೆಲೆಯಲ್ಲಿ ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ವಾಯುಪಡೆಯ ಯುದ್ಧ ವಿಮಾನಗಳ ಪೈಲಟ್‌ಗಳಿಗೆ ತರಬೇತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ.
ಇದು ಚೀನಾವನ್ನು ಮಣಿಸಲು ನಾಲ್ಕೂ ದೇಶಗಳ ಮಿಲಿಟರಿ ಸಹಕಾರದ ಭಾಗವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೆನೆಟ್‌ನಲ್ಲಿ ಮಂಡಿಸಿದ ‘ರಾಷ್ಟ್ರೀಯ ರಕ್ಷಣಾ ದೃಢೀಕರಣ ಮಸೂದೆ–2021’ರಲ್ಲಿ ಈ ಕುರಿತು ವಿಸ್ತೃತ ಪ್ರಸ್ತಾಪ ಮಾಡಲಾಗಿದೆ.
ಹೆಚ್ಚುತ್ತಿರುವ ಚೀನಾ ಪ್ರಾಬಲ್ಯಕ್ಕೆ ತಡೆಯೊಡ್ಡಲು ನಾಲ್ಕೂ ದೇಶಗಳು ಪರಸ್ಪರ ಭದ್ರತಾ ಸಹಕಾರವನ್ನು ನೀಡಲು ಸಮ್ಮತಿಸಿದ್ದು ‘ಕ್ವಾದ್’ (ಚತುಷ್ಕೋನ ಭದ್ರತಾ ಸಹಕಾರ) ಸಂಘಟನೆ ಕಟ್ಟಿಕೊಂಡಿವೆ. ಟ್ರಂಪ್ ಅವರು ಮಸೂದೆಯನ್ನು ಮಂಡಿಸಿದ ಬೆನ್ನಹಿಂದೆಯೇ ತನ್ನ ಇನ್ನಷ್ಟು ಸೇನೆಯನ್ನು ಏಷ್ಯಾದಲ್ಲಿ ನಿಯೋಜಿಸಲು ಅಮೆರಿಕ ತೀರ್ಮಾನಿಸಿದೆ.
ಚೀನಾ ವಿರುದ್ಧ ಗುಡುಗು
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಶುಕ್ರವಾರ ಬ್ರಸೆಲ್ಸ್ ಸಮಾವೇಶದಲ್ಲಿ ಪಾಲ್ಗೊಂಡು ನೀಡಿದ ಹೇಳಿಕೆ ಹೀಗಿದೆ:
‘ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು ಎದುರಿಸಲು ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ನಮ್ಮ ಸೇನೆಯನ್ನು ನಿಯೋಜನೆ ಮಾಡಲಿದ್ದೇವೆ.
ಆ ಸೇನೆಯನ್ನು ಎದುರಿಸುವುದು ನಮ್ಮ ಕಾಲದ ಸವಾಲು ಎಂಬುದಾಗಿ ನಾವು ನಂಬಿದ್ದೇವೆ. ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲು ಅಗತ್ಯವಾದ ಸೇನಾಬಲ ನಮ್ಮಲ್ಲಿದ್ದು, ಅದನ್ನು ಆದ್ಯತೆಯ ಮೇರೆಗೆ ಮಾಡುತ್ತೇವೆ.
‘ಇಂದಿನ ನನ್ನ ಸಂದೇಶ ಹೀಗಿದೆ: ಚೀನಾದ ಸವಾಲನ್ನು ಮೆಟ್ಟಿ ನಿಲ್ಲಲು ಜಗತ್ತಿನಾದ್ಯಂತ ನಾವೆಲ್ಲ ಜತೆಯಾಗಿ ಕೆಲಸ ಮಾಡಬೇಕಿದೆ. ನಮ್ಮ ಮುಕ್ತ ಸಮಾಜಗಳು, ನಮ್ಮ ಅಭಿವೃದ್ಧಿ ಹಾಗೂ ನಮ್ಮ ಭವಿಷ್ಯವನ್ನು ಕಾಪಾಡಿಕೊಳ್ಳಲು ನಾವೆಲ್ಲ ಎಚ್ಚೆತ್ತುಕೊಳ್ಳಲೇಬೇಕಿದೆ. ಆದರೆ, ಈ ಕಾರ್ಯ ಎನಿಸಿದಷ್ಟು ಸುಲಭವಲ್ಲ.
‘ನನ್ನ ಈ ಹೇಳಿಕೆ ಹಲವರಲ್ಲಿ ಉದ್ವೇಗ ಉಂಟುಮಾಡಬಹುದು. ಅದರಲ್ಲೂ ಚೀನಾದಲ್ಲಿ ದುಡ್ಡು ಮಾಡಲು ಹಾತೊರೆಯುತ್ತಿರುವ ಉದ್ಯಮಿಗಳು ಉದ್ವಿಗ್ನ ವಾತಾವರಣವನ್ನು ಶಮನಗೊಳಿಸಿ, ಸಮರೋತ್ಸಾಹಿ ಕಮ್ಯೂನಿಸ್ಟ್ ಚೀನಾವನ್ನು ಒಪ್ಪಿಕೊಳ್ಳುವಂತೆ ಹೇಳಬಹುದು. ಆದರೆ, ಅದು ಅವಿವೇಕದ ವಾದ. ಆ ವಾದವನ್ನು ನಾನು ಒಪ್ಪಲಾರೆ.
‘ಸ್ವಾತಂತ್ರ್ಯ ಮತ್ತು ಸರ್ವಾಧಿಕಾರದ ಮಧ್ಯೆ ರಾಜಿ ಸಾಧ್ಯವಿಲ್ಲ. ಭವಿಷ್ಯವು ಕಮ್ಯೂನಿಸ್ಟ್ ಚೀನಾದಿಂದ ರೂಪಿತವಾಗಬೇಕು ಎಂಬುದನ್ನು ನಾನು ಒಪ್ಪಲಾರೆ. ಯಾರೂ ಒಪ್ಪಲಾರರು ಎನ್ನುವುದು ನನ್ನ ಭಾವನೆ.
‘ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಆಕ್ರಮಣಕಾರಿ ಧೋರಣೆ ಮುಂದುವರಿಸಿರುವ ಚೀನಾ, ಭಾರತದೊಂದಿಗೆ ಗಡಿಯಲ್ಲಿ ಮಾರಣಾಂತಿಕ ಸಂಘರ್ಷದಲ್ಲೂ ತೊಡಗಿದೆ. ತನ್ನ ಅಣುಶಕ್ತಿ ಕಾರ್ಯಕ್ರಮಗಳನ್ನು ಮುಚ್ಚಿಟ್ಟಿರುವ ಚೀನಾ, ನೆರೆಹೊರೆಯ ದೇಶಗಳ ಶಾಂತಿಯ ವಾತಾವರಣಕ್ಕೆ ಅಪಾಯಕಾರಿ’.
ಅಮೆರಿಕಕ್ಕೆ ಏನು ಲಾಭ?
ಶಕ್ತಿಶಾಲಿ ರಾಷ್ಟ್ರವೊಂದು ದುರ್ಬಲ ದೇಶಗಳಿಗೆ ರಕ್ಷಣೆ ಒದಗಿಸಿದಾಗ, ಅದಕ್ಕೆ ಪ್ರತಿಯಾಗಿ ಅಂತಹ ದುರ್ಬಲ ದೇಶಗಳಿಂದ ಹಲವು ಸೌಲಭ್ಯಗಳು ಶಕ್ತಿಶಾಲಿ ರಾಷ್ಟ್ರಕ್ಕೆ ದೊರೆಯುತ್ತವೆ. ಉದಾಹರಣೆಗೆ ದುರ್ಬಲ ದೇಶಗಳ ಭೂಪ್ರದೇಶ ಹಾಗೂ ವಾಯು ಪ್ರದೇಶದ ಮೇಲೆ ಬಲಾಢ್ಯ ರಾಷ್ಟ್ರವು ಬಿಗಿಹಿಡಿತ ಸಾಧಿಸುತ್ತದೆ. ರಕ್ಷಣೆ ಪಡೆದ ದೇಶಗಳ ವಿದೇಶಾಂಗ ನೀತಿಯಲ್ಲೂ ಬಲಾಢ್ಯ ರಾಷ್ಟ್ರದ ಪ್ರಭಾವ ದಟ್ಟವಾಗಿರುತ್ತದೆ.
ಅಮೆರಿಕ ಸೇನೆಯನ್ನು ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ನಿಯೋಜನೆ ಮಾಡಿದ್ದರಿಂದ ಆಗ್ನೇಯ ಹಾಗೂ ಪೂರ್ವ ಏಷ್ಯಾ ವಲಯದಲ್ಲಿ ಅಮೆರಿಕದ ಪ್ರಭಾವ ಹೆಚ್ಚಿದೆ. ‘ಶೀತಲ ಸಮರ’ದ ಸಂದರ್ಭದಲ್ಲೂ ತನಗೆ ಅನುಕೂಲಕರ ದಾಳ ಉರುಳಿಸಲು ಅಮೆರಿಕಕ್ಕೆ ಸಾಧ್ಯವಾಗುತ್ತಿದೆ. ಅಮೆರಿಕ ಸೇನೆಯು ವಿದೇಶಗಳಲ್ಲಿರುವ ನೆಲೆಗಳಲ್ಲಿ ತನ್ನ ಮುಖ್ಯ ಚಟುವಟಿಕೆ ಜತೆಗೆ ಸ್ಥಳೀಯರೊಂದಿಗೆ ಬೆರೆತು ಅಮೆರಿಕ ಪರವಾಗಿ ಸಾರ್ವಜನಿಕ ಅಭಿಪ್ರಾಯ ರೂಪುಗೊಳ್ಳುವಂತೆಯೂ ‘ರಾಯಭಾರ’ ಮಾಡುತ್ತದೆ.
ಜರ್ಮನಿ ನೆಲೆಯ ಮಹತ್ವವೇನು?
ದ್ವಿತೀಯ ಮಹಾಯುದ್ಧ ಕೊನೆಗೊಂಡ ದಿನದಿಂದಲೂ ಯುರೋಪಿನಲ್ಲಿ ಅಮೆರಿಕ ರಕ್ಷಣಾ ತಂತ್ರದ ಅವಿಭಾಜ್ಯ ಅಂಗವಾಗಿದೆ ಜರ್ಮನಿ. ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಜರ್ಮನಿಯಲ್ಲಿ ಈಗ ಅಮೆರಿಕ ಸೇನೆಯ ಸಂಖ್ಯೆ ಕಡಿಮೆಯಾಗಿದೆ ನಿಜ. ಹೀಗಿದ್ದೂ ದೊಡ್ಡ ಪ್ರಮಾಣದಲ್ಲಿಯೇ ತನ್ನ ಉಪಸ್ಥಿತಿಯನ್ನು ಹೊಂದಿದೆ. ಅಮೆರಿಕದ ಮಿಲಿಟರಿ ಸಮುದಾಯದಿಂದ ಜರ್ಮನಿಯ ಹಲವು ನಗರಗಳು ತುಂಬಿಹೋಗಿವೆ. ಅಮೆರಿಕ ಸೇನೆಯ ಯುರೋಪ್ ವಲಯದ ಪ್ರಧಾನ ಕಚೇರಿ ಇರುವುದು ಜರ್ಮನಿಯ ಸ್ಟುಟ್‌ಗರ್ಟ್‌ನಲ್ಲಿ.
ಯುರೋಪ್‌ನಲ್ಲಿ ಅಮೆರಿಕ ವಿರುದ್ಧದ ಸಂಘರ್ಷಗಳನ್ನು ಹತ್ತಿಕ್ಕುವುದು, ನ್ಯಾಟೊ (ಮಿಲಿಟರಿ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡ ಅಮೆರಿಕ ಮತ್ತು ಯುರೋಪ್‌ನ 30 ರಾಷ್ಟ್ರಗಳ ಒಕ್ಕೂಟ) ಸದಸ್ಯ ರಾಷ್ಟ್ರಗಳಿಗೆ ನೆರವು ನೀಡುವುದು ಮತ್ತು ಆಂತರಿಕ ದಂಗೆಗಳನ್ನು ಬಗ್ಗುಬಡಿಯುವುದು ಯುರೋಪ್‌ನಲ್ಲಿರುವ ಅಮೆರಿಕ ಸೇನೆಯ ಕರ್ತವ್ಯ.
ಭೂ, ವಾಯು ಹಾಗೂ ನೌಕಾಪಡೆ – ಹೀಗೆ ಮೂರೂ ಸೇನೆಗಳಿಗೆ ಮುಖ್ಯ ನೆಲೆಯಾಗಿದೆ ಸ್ಟುಟ್‌ಗರ್ಟ್. ದಶಕಗಳ ಹಿಂದೆ ಜರ್ಮನಿಯಲ್ಲಿ ಲಕ್ಷಕ್ಕಿಂತ ಹೆಚ್ಚು ಅಮೆರಿಕ ಸೈನಿಕರಿದ್ದರು. ತನ್ನ ವ್ಯೂಹಾತ್ಮಕ ತಂತ್ರದ ಭಾಗವಾಗಿ ಜಗತ್ತಿನ ವಿವಿಧ ಕಡೆಗಳಲ್ಲಿ ಇಲ್ಲಿನ ಸೇನೆಯನ್ನು ವರ್ಗ ಮಾಡುತ್ತ ಬಂದಿದ್ದರಿಂದ ಅಲ್ಲಿರುವ ಸೇನೆಯ ಪ್ರಮಾಣ ಈಗ ಮೂರನೇ ಒಂದು ಭಾಗಕ್ಕೆ ಕುಸಿದಿದೆ.
ಏಷ್ಯಾದಲ್ಲಿ ಎಲ್ಲಿ ಹೆಚ್ಚಿದೆ?
ದ್ವಿತೀಯ ಮಹಾಯುದ್ಧ ಕೊನೆಗೊಂಡ ದಿನದಿಂದಲೂ ಜಪಾನ್‌ನಲ್ಲಿ ಹತ್ತಾರು ಸಾವಿರ ಅಮೆರಿಕ ಸೈನಿಕರ ಉಪಸ್ಥಿತಿ ಇದೆ. ಜಪಾನ್ 1951ರಲ್ಲಿ ತನ್ನ ಸಾರ್ವಭೌಮತ್ವವನ್ನು ಮರಳಿ ಪಡೆದ ಬಳಿಕ ಅಮೆರಿಕದೊಂದಿಗೆ ಸೇನಾ ಒಪ್ಪಂದವನ್ನೂ ಮಾಡಿಕೊಂಡಿತು. ಆ ಮೂಲಕ ತನ್ನ ನೆಲದಲ್ಲಿ ಅಮೆರಿಕದ ದಂಡಿನ ಪ್ರದೇಶಗಳ ಸ್ಥಾಪನೆಗೆ ಅವಕಾಶವನ್ನು ಮಾಡಿಕೊಟ್ಟಿತು. ಒಂದು ವರ್ಷ ಮುಂಚಿತವಾಗಿ ನೋಟಿಸ್ ನೀಡುವ ಮೂಲಕ ಯಾವುದೇ ದೇಶ ಒಪ್ಪಂದವನ್ನು ಯಾವಾಗ ಬೇಕಾದರೂ ರದ್ದುಗೊಳಿಸಲು ಅವಕಾಶವಿದೆ.
ಆದರೆ, ದಶಕಗಳಿಂದ ಎರಡೂ ದೇಶಗಳ ಸೇನಾ ಬಂಧ ಗಟ್ಟಿಯಾಗಿದೆ. ಉತ್ತರ ಕೊರಿಯಾವು 1953ರಲ್ಲಿ ದಕ್ಷಿಣ ಕೊರಿಯಾದ ಮೇಲೆ ಆಕ್ರಮಣವನ್ನು ನಡೆಸಿದಾಗ ಅದನ್ನು ಹಿಮ್ಮೆಟ್ಟಿಸಲು ಧಾವಿಸಿಬಂದಿದ್ದು ಅಮೆರಿಕ ಸೇನೆ. ವಿಶ್ವಸಂಸ್ಥೆಯ ಒಪ್ಪಿಗೆ ಮೇರೆಗೆ ಅಮೆರಿಕವು ಈ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿತ್ತು. ಆಗಿನಿಂದಲೂ ದೊಡ್ಡ ಸಂಖ್ಯೆಯ ಅಮೆರಿಕ ಸೇನೆ ಇಲ್ಲಿಯೂ ಬೀಡುಬಿಟ್ಟಿದೆ. ದಕ್ಷಿಣ ಕೊರಿಯಾಕ್ಕೆ ರಕ್ಷಣೆಯನ್ನೂ ಒದಗಿಸುತ್ತಿದೆ.
ವೆಚ್ಚ ಭರಿಸುವುದು ಯಾರು?
ಅಮೆರಿಕವು ತನ್ನ ಸೇನಾ ವೆಚ್ಚವನ್ನು ನಿಭಾಯಿಸುವ ಸಲುವಾಗಿ ದಂಡಿನ ಪ್ರದೇಶಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ಎರಡೂ ದೇಶಗಳು ವೆಚ್ಚದ ಹೊರೆಯನ್ನು ಹೊರುತ್ತವೆ.
ಉದಾಹರಣೆಗೆ ಜಪಾನ್‌ನಲ್ಲಿ ಬೀಡುಬಿಟ್ಟ ಅಮೆರಿಕ ಸೇನೆಗೆ ವಾರ್ಷಿಕ 5.7 ಶತಕೋಟಿ ಡಾಲರ್ (₹ 4.31 ಲಕ್ಷ ಕೋಟಿ) ಖರ್ಚಿದೆ.
ಅದರಲ್ಲಿ ಜಪಾನ್ 1.7 ಶತಕೋಟಿ ಡಾಲರ್ (₹ 1.28 ಲಕ್ಷ ಕೋಟಿ) ಭರಿಸುತ್ತದೆ. ಹಾಗೆಯೇ ದಕ್ಷಿಣ ಕೊರಿಯಾದಲ್ಲಿ ಬೀಡುಬಿಟ್ಟ
ಸೇನೆಗೆ 4.5 ದಶಲಕ್ಷ ಡಾಲರ್ (₹3.40 ಲಕ್ಷ ಕೋಟಿ) ಬೇಕು. ಅದರಲ್ಲಿ ದಕ್ಷಿಣ ಕೊರಿಯಾ 8,930 ಲಕ್ಷ ಡಾಲರ್ (₹ 67 ಸಾವಿರ ಕೋಟಿ) ಭರಿಸುತ್ತದೆ.
ಜತೆಗೆ ಎರಡೂ ದೇಶಗಳಿಂದ ಅಮೆರಿಕ ಸೇನೆಗೆ ತೆರಿಗೆ ವಿನಾಯಿತಿ, ಉಚಿತ ಭೂಮಿ ಹಂಚಿಕೆ ಮತ್ತಿತರ ಸೌಲಭ್ಯಗಳನ್ನೂ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.