ವಾಷಿಂಗ್ಟನ್: ಯಾರಿಂದಲೂ, ಯಾವ ನೆರವನ್ನೂ ಪಡೆಯದೇ ಏಕಾಂಗಿಯಾಗಿ ಅಂಟಾರ್ಕ್ಟಿಕಾ ಖಂಡವನ್ನು ಅಮೆರಿಕದ ಸಾಹಸಿಯೊಬ್ಬರು ಸುತ್ತಿದ್ದು, ಈ ಸಾಧನೆ ಮಾಡಿದ ಮೊದಲಿಗ ಎನಿಸಿದ್ದಾರೆ.
ಹೆಪ್ಪುಗಟ್ಟಿರುವ ಖಂಡದ ಉತ್ತರ ತುದಿಯಿಂದ ದಕ್ಷಿಣ ತುದಿಯನ್ನು ಕೊಲಿನ್ ಒಬ್ರಾಡಿ (33) ಎಂಬ ಸಾಹಸಿಯು 54 ದಿನಗಳ ಅವಧಿಯಲ್ಲಿ ಮುಟ್ಟಿದ್ದಾರೆ.
‘ಸಾಹಸಯಾತ್ರೆಯ ಕೊನೆಯ 32 ಗಂಟೆಗಳು ನನ್ನ ಪಾಲಿಗೆ ಸವಾಲಿನ ಅವಧಿಯಾಗಿತ್ತು. ಅವು ನನ್ನ ಪಾಲಿನ ಅಮೂಲ್ಯ ಕ್ಷಣಗಳು’ ಎಂದು ಕೊಲಿನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಕೊಲಿನ್ ಅವರಿಗೆ ಜಿಪಿಎಸ್ ಅಳವಡಿಸಲಾಗಿತ್ತು. ಯಾತ್ರೆಯ ಕ್ಷಣಕ್ಷಣದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗುತ್ತಿತ್ತು.
ಬ್ರಿಟಿಷ್ ಸೇನಾ ಕ್ಯಾಪ್ಟನ್ ಲೂಯಿಸ್ ರುಡ್ ಹಾಗೂ ಕೊಲಿನ್ ಅವರು ಒಂದೇ ದಿನ ಏಕಾಂಗಿ ಯಾತ್ರೆ ಆರಂಭಿಸಿದ್ದರು. ಕೊಲಿನ್ ಡಿಸೆಂಬರ್ 12ರಂದು ಗುರಿ ಮುಟ್ಟಿದರೆ, ರುಡ್ ಅವರು ಎರಡು ದಿನ ತಡವಾಗಿ ಬಂದು ಸೇರಿದರು.
1996ರಲ್ಲಿ ನಾರ್ವೆಯ ಬೊರ್ಜ್ ಔಸ್ಲ್ಯಾಂಡ್ ಎಂಬುವರು ಮೊದಲ ಬಾರಿ ಯಾತ್ರೆ ಕೈಗೊಂಡಿದ್ದರು. ಆದರೆ ನೆರವು ಪಡೆದುಕೊಂಡಿದ್ದರು. 2016ರಲ್ಲಿ ಏಕಾಂಗಿ ಸಂಚಾರ ಕೈಗೊಂಡಿದ್ದ ಬ್ರಿಟಿಷ್ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹೆನ್ರಿ ವರ್ಸ್ಲೆ ಅವರು ದಾರಿಮಧ್ಯೆ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.