ADVERTISEMENT

ಭೌತವಿಜ್ಞಾನ ನೊಬೆಲ್ ಪ್ರಶಸ್ತಿಗೆ ಜಾನ್‌ ಹಾಪ್‌ಫೀಲ್ಡ್, ಜಾಫ್ರಿ ಹಿಂಟನ್‌ ಆಯ್ಕೆ

ಏಜೆನ್ಸೀಸ್
Published 8 ಅಕ್ಟೋಬರ್ 2024, 11:21 IST
Last Updated 8 ಅಕ್ಟೋಬರ್ 2024, 11:21 IST
   

ಸ್ಟಾಕ್‌ಹೋಮ್‌: ಕೃತಕ ಬುದ್ದಿಮತ್ತೆಗೆ ಪೂರಕವಾದ ಅನ್ವೇಷಣೆಗಾಗಿ ಪ್ರಸಕ್ತ ಸಾಲಿನ, ಭೌತವಿಜ್ಞಾನ ಕ್ಷೇತ್ರದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ವಿಜ್ಞಾನಿಗಳಾದ ಜಾನ್‌ ಹಾಪ್‌ಫೀಲ್ಡ್ ಮತ್ತು ಜಾಫ್ರಿ ಹಿಂಟನ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕೃತಕ ಬುದ್ದಿಮತ್ತೆಗೆ ಪೂರಕವಾಗಿ ಮಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಆಕರ ಕೋಶಗಳ ನಿರ್ಮಾಣ ಕುರಿತ ಅನ್ವೇಷಣೆಗಾಗಿ ಈ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಸಮಿತಿಯು ಈ ಕುರಿತ ಹೇಳಿಕೆಯಲ್ಲಿ ತಿಳಿಸಿದೆ.

ಕೃತಕ ಬುದ್ದಿಮತ್ತೆ ಕ್ಷೇತ್ರದ ‘ಗಾಡ್‌ಫಾದರ್’ ಎಂದೇ ಗುರುತಿಸಲಾಗುವ ಹಿಂಟನ್ ಅವರು ಕೆನಡಾ ಮತ್ತು ಬ್ರಿಟನ್ ನಿವಾಸಿಯಾಗಿದ್ದು, ಟೊರಾಂಟೊ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಪ್‌ಫೀಲ್ಡ್‌ ಅವರು ಅಮೆರಿಕ ನಿವಾಸಿಯಾಗಿದ್ದು, ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಈ ವರ್ಷದ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿ ಪುರಸ್ಕೃತ ಇಬ್ಬರು ವಿಜ್ಞಾನಿಗಳು ಪ್ರಸ್ತುತ ಹೆಚ್ಚು ಪ್ರಭಾವಿ ಆಗಿರುವ ‘ಮಷಿನ್‌ ಲರ್ನಿಂಗ್’ ಕಲಿಕೆಗೆ ಅಡಿಪಾಯ ಎಂದು ಹೇಳಲಾಗಿರುವ ಮಾದರಿಯನ್ನು ಭೌತವಿಜ್ಞಾನದ ಅಂಶಗಳನ್ನು ಆಧರಿಸಿ ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿಕೆಯು ವಿವರಿಸಿದೆ.

ಕಳೆದ ವರ್ಷ ಭೌತವಿಜ್ಞಾನ ಕ್ಷೇತ್ರದಲ್ಲಿನ ನೊಬೆಲ್‌ ಪ್ರಶಸ್ತಿಗೆ ಮೂವರು ವಿಜ್ಞಾನಿಗಳನ್ನು ಅಯ್ಕೆ ಮಾಡಲಾಗಿತ್ತು. ಪ್ರಸಕ್ತ ಸಾಲಿನ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಹೆಸರು ಪ್ರಕಟಿಸುವ ಪ್ರಕ್ರಿಯೆಗೆ ಸಮಿತಿ ಸೋಮವಾರ ಚಾಲನೆ ನೀಡಿದೆ.

ಪ್ರಶಸ್ತಿಯು ಒಟ್ಟಾರೆ ₹ 8.93 ಕೋಟಿ ನಗದು ಒಳಗೊಂಡಿದೆ. ಇದುವರೆಗೂ ಒಟ್ಟು 117 ಸಾಧಕರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಡಿಸೆಂಬರ್ 10ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.