ADVERTISEMENT

ಬೈಡನ್‌ರಿಂದಾಗಿ ಅಮೆರಿಕವು ಚೀನಾದ ಮೇಲೆ ಹೆಚ್ಚು ಅವಲಂಬನೆ: ನಿಕ್ಕಿ ಹ್ಯಾಲೆ

ಪಿಟಿಐ
Published 26 ಸೆಪ್ಟೆಂಬರ್ 2023, 2:43 IST
Last Updated 26 ಸೆಪ್ಟೆಂಬರ್ 2023, 2:43 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಕಮ್ಯುನಿಷ್ಟ್‌ ಚೀನಾದ ಮೇಲೆ ಹೆಚ್ಚು ಅವಲಂಬನೆಯಾಗುವಂತೆ ಮಾಡಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಸ್ಪರ್ಧೆಯ ಆಕಾಂಕ್ಷಿ ಭಾರತೀಯ ಮೂಲದ ನಕ್ಕಿ ಹ್ಯಾಲೆ ಅವರು ಆರೋಪಿಸಿದ್ದಾರೆ.

ಅಮೆರಿಕದ ವಿರುದ್ಧ ಶಕ್ತಿಯನ್ನು ಬಳಸುವ ಪ್ರತಿ ಶತ್ರುಗಳ ವಿರುದ್ಧ ನಿಲ್ಲುವ ಪ್ರತಿಜ್ಞೆಯನ್ನು ಬೈಡನ್‌ ಮಾಡಿದ್ದಾರೆ ಎಂದು ಅವರು ಟೀಕೆ ಮಾಡಿದ್ದಾರೆ.

ಒಕ್ಲಹೋಮ ನಗರದಲ್ಲಿ ಹಮ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಅಮೆರಿಕನ್‌ ಎನರ್ಜಿ ಸಂಘಟಿಸಿದ್ದ ‘ಅಮೆರಿಕ ಶಕ್ತಿ ಭದ್ರತೆ ಶೃಂಗ’ದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಮ್ಯುನಿಸ್ಟ್‌ ಚೀನಾದ ಮೇಲೆ ಅತಿಯಾಗಿ ಅವಲಂಬನೆಯಾಗುವಂತೆ ಅವರು (ಬೈಡನ್‌) ಮಾಡಿದ್ದಾರೆ. ಅಗತ್ಯ ವಸ್ತುಗಳ ಸರಬರಾಜಿಗೆ ನಾವು ಎಂದಿಗೂ ಶತ್ರುವನ್ನು ಅವಲಂಬಿಸಬಾರದು ಎನ್ನುವುದನ್ನು ಕೋವಿಡ್ ಸಾಂಕ್ರಮಿಕ ಸಾಬೀತುಪಡಿಸಿದೆ’ ಎಂದು ಹ್ಯಾಲೆ ಹೇಳಿದರು.

‘ನಮಗೆ ಬೇಕಾದ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಪನ್ಮೂಲಗಳು ನಮ್ಮಲ್ಲೇ ಇವೆ. ಪರಿಸರವನ್ನು ಸಂರಕ್ಷಿಸಿಕೊಳ್ಳಲು ನಮ್ಮನ್ನು ನಾವು ಬಡವರಾಗಿಸಿಕೊಳ್ಳಬೇಕಿಲ್ಲ. ನಮ್ಮ ದೇಶವನ್ನು ಶುಚಿಯಾಗಿ, ಆರೋಗ್ಯವಾಗಿ ಹಾಗೂ ಸಂತೋಷವಾಗಿಡಲು ಅಮೆರಿಕದ ಶಕ್ತಿಯನ್ನು ಹೆಚ್ಚಾಗಿ ಉಪಯೋಗಿಸಿಕೊಳ್ಳಬೇಕು’ ಎಂದು ಅವರು ನುಡಿದರು.

‘ಚೀನಾ ಮಾತ್ರವಲ್ಲ ನಮ್ಮ ವಿರುದ್ದ ಶಕ್ತಿ ಪ್ರಯೋಗಿಸುವ ಪ್ರತಿಯೊಬ್ಬ ಶತ್ರುಗಳ ವಿರುದ್ಧ ನಾನು ನಿಲ್ಲುತ್ತೇನೆ. ರಷ್ಯಾ, ಇರಾನ್ ಹಾಗೂ ವೆನಿಝುವೆಲಾ ಮುಂತಾದ ರಾಷ್ಟ್ರಗಳು ತಮ್ಮ ತೈಲಸಂಪತ್ತು ಬಳಸಿಕೊಂಡು ಅಮೆರಿಕ ವಿರುದ್ಧ ಕೆಟ್ಟ ಕೆಲಸಗಳು ಮಾಡುತ್ತಿವೆ. ಅದರೆ ಜೋ ಬೈಡನ್‌ ಸುಮ್ಮನಿದ್ದಾರೆ. ಆದರೆ ನಾನು ಹಾಗೆ ಆಗಲು ಬಿಡುವುದಿಲ್ಲ. ನಮ್ಮ ಶತ್ರುಗಳಿಗೆ ದುಃಸ್ವಪ್ನ ತೋರಿಸುತ್ತೇನೆ’ ಎಂದು ಅವರು ಗುಡುಗಿದ್ದಾರೆ.

‘ಅಮೆರಿಕನ್ನರಿಗಿಂತ ಹೆಚ್ಚು ಸೃಜನಶೀಲರು ಅಥವಾ ಚತುರರು ಯಾರೂ ಇಲ್ಲ ಎಂದು ಇತಿಹಾಸವು ಸಾಬೀತುಪಡಿಸುತ್ತದೆ. ನಮಗೆ ಕನಸು ಮತ್ತು ಧೈರ್ಯವಿರುವಾಗ, ನಾವು ಜೀವನವನ್ನು ನಂಬಲಾಗದ ರೀತಿಯಲ್ಲಿ ಪರಿವರ್ತಿಸಬಹುದು. ಜಗತ್ತು ಇಂದು ಸ್ವಚ್ಛವಾಗಿದೆ, ಶ್ರೀಮಂತವಾಗಿದೆ ಮತ್ತು ಸುರಕ್ಷಿತವಾಗಿದೆ ಏಕೆಂದರೆ ಅಮೆರಿಕನ್ನರು ಏನು ಮಾಡಿದರೂ ಉತ್ತಮವಾಗಿ ಮಾಡುತ್ತಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.