ADVERTISEMENT

ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕ ಯುದ್ಧನೌಕೆಗಳು

ಏಜೆನ್ಸೀಸ್
Published 4 ಜುಲೈ 2020, 12:04 IST
Last Updated 4 ಜುಲೈ 2020, 12:04 IST
ಅಮೆರಿಕ ಯುದ್ಧನೌಕೆ (ಸಂಗ್ರಹ ಚಿತ್ರ)
ಅಮೆರಿಕ ಯುದ್ಧನೌಕೆ (ಸಂಗ್ರಹ ಚಿತ್ರ)   

ಮಿತ್ರರಾಷ್ಟ್ರಗಳೊಂದಿಗೆ ಸಮರಾಭ್ಯಾಸಕ್ಕಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕವು ಎರಡು ಆಣುಶಕ್ತಿ ಚಾಲಿತ ವಿಮಾನವಾಹಕ ಯುದ್ಧನೌಕೆಗಳನ್ನು ಕಳುಹಿಸಿಕೊಟ್ಟಿದೆ.

ನೆಲ ಮತ್ತು ಸಾಗರ ಗಡಿ ವಿಚಾರವಾಗಿ ಭಾರತ ಸೇರಿದಂತೆ ಸುತ್ತಲಿನ ದೇಶಗಳೊಂದಿಗೆ ಸಂಘರ್ಷಕ್ಕಿಳಿದಿರುವ ಚೀನಾಕ್ಕೆ ಅಮೆರಿಕ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ.

ಯುಎಸ್‌ಎಸ್‌ ನಿಮಿಟ್ಜ್‌ ಮತ್ತು ಯುಎಸ್‌ಎಸ್‌ ರೊನಾಲ್ಡ್ ರೀಗನ್ ಯುದ್ಧನೌಕೆಗಳು ತೈವಾನ್‌ ಮತ್ತು ಲುಝೊನ್ ದ್ವೀಪಗಳ ನಡುವಣ ಲುಝೊನ್ ಕೊಲ್ಲಿಯನ್ನು ದಾಟಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಲುಝೊನ್ ಕೊಲ್ಲಿಯು ಪಿಲಿಪೈನ್ಸ್‌ ಸಮುದ್ರವನ್ನು ಮತ್ತು ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.

ADVERTISEMENT

ಈಚೆಗಷ್ಟೇ ಚೀನಾದ ನೌಕಾಪಡೆಯು ದಕ್ಷಿಣ ಚೀನಾದ ವಿವಾದಿತ ಸಾಗರ ಪ್ರದೇಶಗಳಲ್ಲಿ ಸಮರ ನೌಕೆಗಳನ್ನು ನಿಯೋಜಿಸಿ, ಯುದ್ಧಾಭ್ಯಾಸ ಮಾಡಿತ್ತು. ಇದು ಸುತ್ತಲಿನ ದೇಶಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣ ಚೀನಾ ಸಮುದ್ರದತ್ತ ತೆರಳಲು ತನ್ನ ಯುದ್ಧನೌಕೆಗಳಿಗೆ ಸೂಚಿಸಿರುವ ಅಮೆರಿಕ, 'ಇಂಡೊ ಪೆಸಿಫಿಕ್ ವಲಯವನ್ನು ಮುಕ್ತವಾಗಿರಿಸುವುದು ನಮ್ಮ ಉದ್ದೇಶ' ಎಂದು ಹೇಳಿದೆ.

ದಕ್ಷಿಣ ಚೀನಾ ಸಮುದ್ರದಶೇ 90ರಷ್ಟು ಪ್ರದೇಶವನ್ನು ತನ್ನದೆಂದು ಚೀನಾ ವಾದಿಸುತ್ತಿದೆ. ವರ್ಷಕ್ಕೆ 3 ಶತಕೋಟಿ ಡಾಲರ್‌ನಷ್ಟು ಸರಕು ಈ ಪ್ರದೇಶದಲ್ಲಿ ಸಾಗುತ್ತದೆ. ಸಾಗರ ವ್ಯಾಪಾರವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳುವ ಉದ್ದೇಶದಿಂದಲೇ ಈ ವಲಯದಲ್ಲಿ ಕೆಲ ಕೃತಕ ದ್ವೀಪಗಳನ್ನು ನಿರ್ಮಿಸಿ ಸೇನೆಯನ್ನು ನಿಯೋಜಿಸಿದೆ. ರನ್‌ವೇಗಳನ್ನು ರೂಪಿಸಿದೆ.

ದಕ್ಷಿಣ ಚೀನಾ ಸಮುದ್ರವನ್ನು ನಿಯಂತ್ರಿಸುವ ವಿಚಾರದಲ್ಲಿ ಬ್ರುನೈ, ಮಲೇಷಿಯಾ, ಪಿಲಿಪ್ಪಿನ್ಸ್, ತೈವಾನ್ ಮತ್ತು ವಿಯೆಟ್ನಾಂಗಳೊಂದಿಗೆ ಚೀನಾ ವಿವಾದ ಹೊಂದಿದೆ ಎಂದು 'ಹಿಂದೂಸ್ತಾನ್ ಟೈಮ್ಸ್‌' ಜಾಲತಾಣ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.