ADVERTISEMENT

ನೂರಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸದಿರಿ- ಪಾಕ್‌ಗೆ ಆಮ್ನೆಸ್ಟಿ ಆಗ್ರಹ

ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಎತ್ತಿ ಹಿಡಿಯಿರಿ; ಪಾಕಿಸ್ತಾನಕ್ಕೆ ಆಮ್ನೆಸ್ಟಿ ಆಗ್ರಹ

ಪಿಟಿಐ
Published 21 ಮೇ 2024, 11:23 IST
Last Updated 21 ಮೇ 2024, 11:23 IST
ಡಾ. ಆ್ಯಗ್ನೆಸ್ ಕ್ಯಾಲಮಾರ್ಡ್
ಡಾ. ಆ್ಯಗ್ನೆಸ್ ಕ್ಯಾಲಮಾರ್ಡ್   

ಕರಾಚಿ (ಪಿಟಿಐ): ‘ಮಾಜಿ ಪ್ರಧಾನಿ ಇಮ್ರಾನ್ ಖಾನ್‌ ಅವರನ್ನು ಕಳೆದ ವರ್ಷ ಮೇ 9ರಂದು ಬಂಧಿಸಿದ ನಂತರ ಪಾಕಿಸ್ತಾನದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ, ನೂರಕ್ಕಿಂತಲೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಬಾರದು’ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮುಖ್ಯಸ್ಥರು ಆಗ್ರಹಿಸಿದ್ದಾರೆ.

‘ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಡಂಬಡಿಕೆಯು ನಾಗರಿಕರನ್ನು ಸೇನಾ ನ್ಯಾಯಾಲಯಗಳು ವಿಚಾರಣೆಗೆ ಒಳಪಡಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ’ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಡಾ. ಆ್ಯಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

ದಕ್ಷಿಣ ಏಷ್ಯಾಗೆ ಮೊದಲ ಭೇಟಿ ನೀಡಿರುವ ಅವರು, ‘ಸೇನಾ ನ್ಯಾಯಾಲಯಗಳು ನಾಗರಿಕರನ್ನು ವಿಚಾರಣೆಗೊಳಪಡಿಸಲು ಅಂತರರಾಷ್ಟ್ರೀಯ ಕಾನೂನಿನಡಿ ಅವಕಾಶ ಇಲ್ಲದಿದ್ದರೂ, ಪಾಕಿಸ್ತಾನದ ರಾಜಕೀಯ ಇತಿಹಾಸದುದ್ದಕ್ಕೂ ಇದು ನಡೆದಿರುವುದು ದುಃಖಕರ’ ಎಂದಿದ್ದಾರೆ.

ADVERTISEMENT

‘ಪಾಕಿಸ್ತಾನ ಸರ್ಕಾರವು ಅಂತರರಾಷ್ಟ್ರೀಯ ಜವಾಬ್ದಾರಿಗಳನ್ನು ಎತ್ತಿ ಹಿಡಿಯಬೇಕು. ನ್ಯಾಯಯುತ ವಿಚಾರಣೆಯನ್ನು ಖಾತ್ರಿಪಡಿಸುವ ಸಾಂವಿಧಾನಿಕ ಹಕ್ಕನ್ನು ರಕ್ಷಿಸಬೇಕು’ ಎಂದು ಕ್ಯಾಲಮಾರ್ಡ್ ಒತ್ತಾಯಿಸಿದ್ದಾರೆ.

‘ಸೇನಾ ನ್ಯಾಯಾಲಯಗಳ ಬಳಕೆಯು ಸಂವಿಧಾನಕ್ಕೆ ಬೆದರಿಕೆವೊಡ್ಡುವ ತಂತ್ರ. ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಕ್ಷೀಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.