ADVERTISEMENT

ಸೂಕಿ ಪುರಸ್ಕಾರ ಮರಳಿ ಪಡೆದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌

ಪ್ರಶಸ್ತಿ ಅಗತ್ಯವಿಲ್ಲ: ಮ್ಯಾನ್ಮಾರ್

ಏಜೆನ್ಸೀಸ್
Published 13 ನವೆಂಬರ್ 2018, 16:56 IST
Last Updated 13 ನವೆಂಬರ್ 2018, 16:56 IST
ಸೂಕಿ
ಸೂಕಿ   

ಯಾಂಗೂನ್‌: ಅಂಗ್ ಸಾನ್‌ ಸೂಕಿ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸೋಮವಾರ ವಾಪಸು ಪಡೆದ ಬೆನ್ನಲ್ಲೇ ಮ್ಯಾನ್ಮಾರ್‌ ಸರ್ಕಾರ ಹಾಗೂ ಜನತೆ ಸೂಕಿ ಬೆಂಬಲಕ್ಕೆ ನಿಂತಿದ್ದಾರೆ.

ಸೂಕಿ ಅವರಿಗೆ ಸಂಸ್ಥೆಯು 2009ರಲ್ಲಿ ‘ಅಂಬಾಸಡರ್‌ ಆಫ್‌ ಕನ್ಸೈನ್ಸ್‌ ಅವಾರ್ಡ್‌’ ನೀಡಿತ್ತು. ಆದರೆ, ರೋಹಿಂಗ್ಯಾ ಮುಸ್ಲಿಮರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸೂಕಿ ವಿಫಲರಾಗಿದ್ದಾರೆ ಎಂಬ ಕಾರಣವೊಡ್ಡಿ ಈಗ ಪ್ರಶಸ್ತಿಯನ್ನು ವಾಪಸು ಪಡೆಯಲಾಗಿದೆ.

‘ಪ್ರಶಸ್ತಿಯನ್ನು ಕಿತ್ತುಕೊಂಡಿರುವುದುಸೂಕಿ ಅವರ ಘನತೆಗೆ ಮಾತ್ರವಲ್ಲ, ಅವರು ಪ್ರತಿನಿಧಿಸುವ ಪಕ್ಷ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ (ಎನ್‌ಎಲ್‌ಡಿ) ಸದಸ್ಯರಿಗೂ ಮಾಡಿರುವ ಅವಮಾನ’ ಎಂದು ಪಕ್ಷದ ವಕ್ತಾರ ಮೈಯೊ ನ್ಯೂಂಟ್‌ ಎಎಫ್‌ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

‘ಈ ಕ್ರಮದ ಹಿಂದೆ ದೊಡ್ಡ ಪಿತೂರಿಯೇ ಇದೆ. ದೇಶ ತೊರೆದು, ಬಾಂಗ್ಲಾದೇಶದ ಪೌರತ್ವ ಪಡೆಯಲು ಯತ್ನಿಸುತ್ತಿರುವವರ ಪರವಾಗಿ ಎಲ್ಲ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿರುವುದನ್ನು ತೋರಿಸುತ್ತದೆ’ ಎಂದೂ ದೂರಿದರು.

‘ನಮಗೆ ಅವರು (ಅಮ್ನೆಸ್ಟಿ ಇಂಟರ್‌ನ್ಯಾಷನಲ್‌) ನೀಡುವ ಪ್ರಶಸ್ತಿಯ ಅಗತ್ಯ ಇಲ್ಲ’ ಎಂದು 60 ವರ್ಷದ ಟೇ ಟೇ ಹೇಳಿದರೆ, ‘ಈ ಕ್ರಮ ಬಾಲಿಶ.ಮಕ್ಕಳು ತಮ್ಮ ಮಾತನ್ನು ಕೇಳದಿದ್ದಾಗ ಅವರಿಗೆ ನೀಡಿದ್ದ ಆಟಿಕೆಗಳನ್ನು ಕಸಿದುಕೊಳ್ಳುವ ರೀತಿಯಂತಿದೆ’ ಎಂದು ಖಿನ್‌ ಮೌಂಗ್‌ ಆಯೆ ಅಭಿಪ್ರಾಯಪಟ್ಟರು.

ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆದ ದೌರ್ಜನ್ಯ ಖಂಡಿಸಿದ್ದ ಕೆನಡಾ, ಸೂಕಿ ಅವರಿಗೆ ನೀಡಿದ್ದ ಗೌರವ ಪೌರತ್ವವನ್ನು ಕಳೆದ ವರ್ಷ ರದ್ದು ಮಾಡಿತ್ತು.

‘ನಮಗೆ ನಿರಾಸೆ ಆಗಿದೆ...’

‘ನಿಮ್ಮ ನಡೆಯಿಂದ ತೀವ್ರ ನಿರಾಸೆಯಾಗಿದೆ. ಮಾನವ ಹಕ್ಕುಗಳ ರಕ್ಷಕರನ್ನು ನೀವು ಪ್ರತಿನಿಧಿಸುತ್ತಿಲ್ಲ’ ಎಂದು ಅಮ್ನೆಸ್ಟಿ ಇಂಟರ್‌ ನ್ಯಾಷನಲ್‌ನ ಮುಖ್ಯಸ್ಥರಾದ ಕುಮಿ ನೈಡೂ, ಸೂಕಿಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

‘ಪ್ರಶಸ್ತಿಯನ್ನು ನಿಮಗೆ ಪ್ರದಾನ ಮಾಡಿರುವುದನ್ನು ಸಂಘಟನೆ ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಈ ಪ್ರಶಸ್ತಿಯನ್ನು ಅತೀವ ದುಃಖದಿಂದ ವಾಪಸು ಪಡೆಯುತ್ತಿದ್ದೇವೆ’ ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.