ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಕೊಪಾ ರೆಸ್ಟೋರೆಂಟ್‌ನ ಜನಾಂಗೀಯ ನಿಂದನೆ ನಡವಳಿಕೆಯ ವಿರುದ್ಧ ನಟಿ ಹಾಗೂ ಗಾಯಕಿ ಅನನ್ಯಾ ಬಿರ್ಲಾ ಕಿಡಿಕಾರಿದ್ದಾರೆ.
ಅನನ್ಯಾ ಅವರು ಆದಿತ್ಯ ಬಿರ್ಲಾ ಸಮೂಹದ ಮುಖ್ಯಸ್ಥ ಕುಮಾರ ಮಂಗಲಂ ಬಿರ್ಲಾ ಅವರ ಮಗಳು.
‘ಈ ರೆಸ್ಟೋರೆಂಟ್‌ನವರು (ಸ್ಕೊಪಾ) ನನ್ನ ಜೊತೆ ನನ್ನ ಕುಟುಂಬದವರನ್ನು ಅಕ್ಷರಶಃ ಹೊರ ದಬ್ಬಿದರು. ಇದು ಕ್ರೂರ ನಡವಳಿಕೆ. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಇದು ನಿಮ್ಮ ಗ್ರಾಹಕರ ಜೊತೆ ನೀವು ನಡೆದುಕೊಳ್ಳುವ ರೀತಿಯೇ. ಜನಾಂಗೀಯ ದ್ವೇಷದ ಈ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅನನ್ಯಾಟ್ವೀಟ್ ಮಾಡಿದ್ದಾರೆ.
‘ನಿಮ್ಮ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಮೂರು ಗಂಟೆಗಳ ಕಾಲ ಕಾದೆವು. ನಿಮ್ಮ ರೆಸ್ಟೋರೆಂಟ್‌ನ ಮಾಣಿ (ವೇಟರ್) ಜೊಶುವಾ ಸಿಲ್ವರ್‌ಮನ್, ನನ್ನ ತಾಯಿಯ ಜೊತೆ ತುಂಬಾ ಕೆಟ್ಟದಾಗಿ ನಡೆದುಕೊಂಡ. ಇದು ಸರಿಯಲ್ಲ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಹರಿಹಾಯ್ದಿದ್ದಾರೆ.
ಈ ಟ್ವೀಟ್ ಅನ್ನು ಸ್ಕೊಪಾ ರೂಟ್ಸ್ ರೆಸ್ಟೋರೆಂಟ್‌ನ ಒಡತಿ ಆ್ಯಂಟೊನಿಯೊ ಲೊಫಾಸೊ ಅವರಿಗೂ ಟ್ಯಾಗ್ ಮಾಡಿದ್ದಾರೆ.
‘ರೆಸ್ಟೋರೆಂಟ್ ಸಿಬ್ಬಂದಿಯ ವರ್ತನೆ ಕಂಡು ತುಂಬಾ ಆಘಾತವಾಗಿದೆ. ಯಾವೊಬ್ಬ ಗ್ರಾಹಕರನ್ನೂ ಇಷ್ಟು ಕೆಟ್ಟದಾಗಿ ನಡೆಸಿಕೊಳ್ಳುವ ಹಕ್ಕು ನಿಮಗಿಲ್ಲ ’ ಎಂದು ಅನನ್ಯಾ ಅವರ ತಾಯಿ ನೀರಜಾ ಬಿರ್ಲಾ ಟ್ವೀಟ್ ಮಾಡಿದ್ದಾರೆ.
‘ನನಗೆ ಇದುವರೆಗೂ ಇಂತಹ ಯಾವ ಅನುಭವವೂ ಆಗಿರಲಿಲ್ಲ. ಜನಾಂಗೀಯ ದ್ವೇಷ ಅಸ್ತಿತ್ವದಲ್ಲಿರುವುದಕ್ಕೆ ಈ ಘಟನೆಯೇ ಸಾಕ್ಷಿ. ಇದನ್ನು ನಂಬಲಾಗುತ್ತಿಲ್ಲ’ ಎಂದು ಅನನ್ಯಾ ಅವರ ಸಹೋದರ ಆರ್ಯಮನ್ ಬಿರ್ಲಾ, ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.