ನವದೆಹಲಿ: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಭಾರತೀಯ ಪಾಲುದಾರನನ್ನಾಗಿ ‘ರಿಲಯನ್ಸ್ ಡಿಫೆನ್ಸ್’ ಅನ್ನು ಆಯ್ಕೆ ಮಾಡಿದ್ದು ತನ್ನದೇ ನಿರ್ಧಾರ ಎಂದು ಫ್ರಾನ್ಸ್‌ನ ಕಂಪೆನಿ ‘ಡಸಾಲ್ಟ್ ಏವಿಯೇಷನ್’ ಹೇಳಿಕೊಂಡಿದೆ.
‘2016ರ ರಕ್ಷಣಾ ಖರೀದಿ ವಿಧಾನದ (ಡಿಪಿಪಿ) ನಿಯಮಗಳ ಅನ್ವಯ ಗುತ್ತಿಗೆ ಮಾಡಿಕೊಳ್ಳಲಾಗಿತ್ತು. ಈ ಚೌಕಟ್ಟಿನಡಿ ಮತ್ತು ಮೇಕ್ ಇನ್ ಇಂಡಿಯಾ (ಭಾರತದಲ್ಲೇ ತಯಾರಿಸಿ) ಯೋಜನೆ ಅಡಿ ಭಾರತದ ಸಹಭಾಗಿತ್ವವನ್ನು ರಿಲಯನ್ಸ್ ಡಿಫೆನ್ಸ್‌ಗೆ ನೀಡಲಾಗಿತ್ತು. ಇದು ಡಸಾಲ್ಟ್ ಏವಿಯೇಷನ್ ನಿರ್ಧಾರವಾಗಿತ್ತು’ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಉಭಯ ಕಂಪೆನಿಗಳ ನಡುವಣ ಸಹಭಾಗಿತ್ವದ ಫಲವಾಗಿ 2017ರ ಫೆಬ್ರುವರಿಯಲ್ಲಿ ‘ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (ಡಿಆರ್‌ಎಎಲ್) ಎಂಬ ಜಂಟಿ ಸಂಸ್ಥೆ ರೂಪುತಾಳಿತು ಎಂದು ಡಸಾಲ್ಟ್ ಹೇಳಿದೆ.
‘ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ತನ್ನನ್ನು ಪರಿಗಣಿಸಿರುವುದಕ್ಕೆ ಹೆಮ್ಮೆಯಿದೆ’ ಎಂದೂ ಡಸಾಲ್ಟ್ ಹೇಳಿದೆ.
ಡಸಾಲ್ಟ್ ಕಂಪೆನಿ ಜತೆಗೆ ರಫೇಲ್ ಯುದ್ಧ ವಿಮಾನ ಖರೀದಿಸಲು ಮಾಡಿಕೊಂಡ ಒಪ್ಪಂದದಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನೇ ದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿತ್ತು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಶುಕ್ರವಾರ ಹೇಳಿದ್ದರು. ಈ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ರಫೇಲ್ ಹಗರಣದಲ್ಲಿ ಅಂಬಾನಿ ಪರ ಮೋದಿ ಲಾಬಿ: ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ್
ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಫ್ರಾನ್ಸ್ ಸರ್ಕಾರ, ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಫ್ರಾನ್ಸ್ ಕಂಪೆನಿಗಳ ಜತೆ ಭಾರತದ ಯಾವ ಕಂಪೆನಿ ಸಹಭಾಗಿತ್ವ ವಹಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ವಿಷಯದಲ್ಲಿ ಫ್ರಾನ್ಸ್ ಸರ್ಕಾರ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ರಫೇಲ್ ಒಪ್ಪಂದ: ಭಾರತೀಯ ಕಂಪೆನಿ ಆಯ್ಕೆಯಲ್ಲಿ ನಮ್ಮ ಪಾತ್ರವಿಲ್ಲ ಎಂದ ಫ್ರಾನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.