ADVERTISEMENT

ಬಾಂಗ್ಲಾದೇಶ | ಮಾಜಿ ಪ್ರಧಾನಿ ಹಸೀನಾ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲು

ಪಿಟಿಐ
Published 16 ಆಗಸ್ಟ್ 2024, 11:34 IST
Last Updated 16 ಆಗಸ್ಟ್ 2024, 11:34 IST
<div class="paragraphs"><p>ಶೇಖ್‌ ಹಸೀನಾ</p></div>

ಶೇಖ್‌ ಹಸೀನಾ

   

-ಪಿಟಿಐ ಚಿತ್ರ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಇಂದು (ಶುಕ್ರವಾರ) ಮತ್ತೊಂದು ಕೊಲೆ ಪ್ರಕರಣ ದಾಖಲಾಗಿದೆ.

ADVERTISEMENT

ದೇಶದಲ್ಲಿ ಈಚೆಗೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಶಿಕ್ಷಕರೊಬ್ಬರ ಹತ್ಯೆ ಪ್ರಕರಣ ಸಂಬಂಧ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಆಗಸ್ಟ್ 4ರಂದು ಶಿಬ್‌ಗಂಜ್ ಉಪಜಿಲ್ಲಾದ ಪಾಲಿಕಂಡ ಗ್ರಾಮದ ನಿವಾಸಿ 35 ವರ್ಷದ ಸಲೀಂ ಹುಸೇನ್ (ಶಿಕ್ಷಕ) ಅವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಹಸೀನಾ ಮತ್ತು ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್ ವಿರುದ್ಧ ಬೋಗುರಾದ ಸದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಲ್ಲದೇ ಅವರ ಪಕ್ಷದ 99 ಇತರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ.

ಹಸೀನಾ ಮತ್ತು ಒಬೈದುಲ್ ಕ್ವಾಡರ್ ಅವರ ಆದೇಶದಂತೆ ಅವಾಮಿ ಲೀಗ್‌ನ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಹುಸೇನ್ ಅವರನ್ನು ಮಾರಕಾಸ್ತ್ರಗಳಿಂದ ಇರಿದು ಕೊಂದಿದ್ದಾರೆ ಎಂದು ಅವರ ಸಹೋದರ ಆರೋಪಿಸಿದ್ದಾರೆ.

ಇದಲ್ಲದೇ ಹಸೀನಾ ವಿರುದ್ಧ ಕಿರಾಣಿ ಅಂಗಡಿ ಮಾಲೀಕನ ಹತ್ಯೆ ಸಂಬಂಧ ಕೊಲೆ ಪ್ರಕರಣ ಹಾಗೂ 2015ರಲ್ಲಿ ವಕೀಲರನ್ನು ಅಪಹರಿಸಿದ ಆರೋಪದ ಮೇಲೆ ನಾಪತ್ತೆ ಪ್ರಕರಣ ಕೂಡ ದಾಖಲಾಗಿವೆ.

ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಹಸೀನಾ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹಸೀನಾ ಆಗಸ್ಟ್ 5 ರಂದು ಭಾರತಕ್ಕೆ ಪಲಾಯನ ಮಾಡಿದ್ದರು.

ಹಸೀನಾ ನೇತೃತ್ವದ ಸರ್ಕಾರದ ಪತನದ ನಂತರ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.