ADVERTISEMENT

ಸುಯೆಜ್‌ ಕಾಲುವೆಗೆ ಎದುರಾಗಿತ್ತು ಮತ್ತೊಂದು ಕಂಟಕ...!

ಏಜೆನ್ಸೀಸ್
Published 1 ಸೆಪ್ಟೆಂಬರ್ 2022, 7:50 IST
Last Updated 1 ಸೆಪ್ಟೆಂಬರ್ 2022, 7:50 IST
ಕಾಲುವೆಯಲ್ಲಿ ಸಿಲುಕಿಕೊಂಡಿರುವ ತೈಲ ಟ್ಯಾಂಕರ್‌
ಕಾಲುವೆಯಲ್ಲಿ ಸಿಲುಕಿಕೊಂಡಿರುವ ತೈಲ ಟ್ಯಾಂಕರ್‌    

ಕೈರೊ: ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ತೈಲ ಟ್ಯಾಂಕರ್‌ವೊಂದು ಬುಧವಾರ ರಾತ್ರಿ ಸಿಲುಕಿಕೊಂಡಿತ್ತು. ಹೀಗಾಗಿ ಕಾಲುವೆಯು ಹಡಗುಗಳ ಸಂಚಾರ ನಿರ್ಬಂಧಕ್ಕೆ ಒಳಗಾಗುವ ಭೀತಿ ಎದುರಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಫಿನಿಟಿ ವಿ’ ಎಂಬ ಹಡಗು ಬುಧವಾರ ರಾತ್ರಿ 7.15ರ ಸಮಾರಿನಲ್ಲಿ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿತ್ತು ಎಂದು ಭದ್ರತಾ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ. ‘ಸ್ವಲ್ಪ ಸಮಯದ ನಂತರ ಹಡಗನ್ನು ಕಾಲುವೆಯಿಂದ ತೆರವು ಮಾಡಿ, ಸಂಚಾರಕ್ಕೆ ಮರುಚಾಲನೆ ನೀಡಲಾಯಿತು’ ಎಂದು ಅವರು ಹೇಳಿದರು.

‘ರಡ್ಡರ್‌ (ಹಡಗಿನ ಮುಂಭಾಗದಲ್ಲಿರುವ ಇರುವ ತಿರುಗುವ ಯಂತ್ರ)ನಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆಯಿಂದಾಗಿ, ನಿಂಯತ್ರಣ ಕಳೆದುಕೊಂಡಿದ್ದ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿತ್ತು. ಕ್ಷಿಪ್ರ ಕಾರ್ಯಾಚರಣೆಯ ನಂತರ 64,000 ಟನ್ ತೂಕದ ಹಡಗನ್ನು ಯಶಸ್ವಿಯಾಗಿ ತೆರವು ಮಾಡಲಾಗಿದೆ’ ಎಂದು ಸುಯೆಜ್ ಕಾಲುವೆ ಪ್ರಾಧಿಕಾರ ತಿಳಿಸಿದೆ.

ಕಾರ್ಯಾಚರಣೆಗಾಗಿ ಐದಕ್ಕೂ ಹೆಚ್ಚು ಟೋಯಿಂಗ್ ವಾಹನಗಳನ್ನು ಬಳಸಿಕೊಳ್ಳಲಾಯಿತು ಎಂದು ಪ್ರಾಧಿಕಾರ ಹೇಳಿದೆ.
‘250 ಮೀಟರ್ ಉದ್ದದ, ಸಿಂಗಪುರದ ಟ್ಯಾಂಕರ್ ಸೌದಿ ಬಂದರಿನ ಯಾನ್‌ಬುಗೆ ತೆರಳುತ್ತಿತ್ತು’ ಎಂದು ‘ವೆಸೆಲ್ ಫೈಂಡರ್’ ವೆಬ್‌ಸೈಟ್ ಹೇಳಿದೆ.

ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿರುವ ಸುಯೆಜ್ ಕಾಲುವೆಯು ಪ್ರಪಂಚದ ಸಾಗರ ವಹಿವಾಟಿನ ಶೇ 10ರಷ್ಟು ಪಾಲು ಹೊಂದಿದೆ.

ಕಳೆದ ವರ್ಷ, ಸೂಪರ್ ಟ್ಯಾಂಕರ್ ‘ಎವರ್ ಗಿವನ್’ ಎಂಬ ಸರಕು ಸಾಗಣೆ ಹಡಗು ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿತ್ತು. ಹೀಗಾಗಿ ಹಡುಗುಗಳ ಸಂಚಾರಕ್ಕೆ ಅಡ್ಡಿಯುಂಟಾಗಿ, ಸುಮಾರು ಒಂದು ವಾರದವರೆಗೆ ವಿಶ್ವ ವ್ಯಾಪಾರವನ್ನು ಅಲುಗಾಡಿಸಿತ್ತು.

‘ಎವರ್ ಗಿವನ್’ ಹಡಗು ಸಿಕ್ಕಿಹಾಕಿಕೊಂಡ ಕಾಲುವೆಯ ದಕ್ಷಿಣ ಭಾಗವನ್ನು ವಿಸ್ತರಿಸಲು ಮತ್ತು ಆಳಗೊಳಿಸುವ ಯೋಜನೆಗೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರು ಮೇ ತಿಂಗಳಲ್ಲಿ ಅನುಮೋದನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.