ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿರುವ ಬಿಎಪಿಎಸ್ (ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥೆ) ಸ್ವಾಮಿನಾರಾಯಣ ದೇವಾಲಯದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆದು ವಿರೂಪಗೊಳಿಸಲಾಗಿದೆ. ಘಟನೆಯನ್ನು ಖಂಡಿಸಿರುವ ಭಾರತೀಯ ಹೈಕಮಿಷನ್, ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಕೆನಡಾದ ಅಧಿಕಾರಿಗಳನ್ನು ಒತ್ತಾಯಿಸಿದೆ.
ಬಿಎಪಿಎಸ್ ಸ್ವಾಮಿನಾರಾಯಣ ದೇವಾಲಯ ವಿರೂಪ ಘಟನೆಯು ಯಾವಾಗ ಸಂಭವಿಸಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
‘ಟೊರೊಂಟೊದಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಭಾರತ ವಿರೋಧಿ ಬರಹದ ಮೂಲಕ ವಿರೂಪಗೊಳಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯ ಬಗ್ಗೆ ತನಿಖೆ ನಡೆಸಲು ಮತ್ತು ಅಪರಾಧಿಗಳ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳಿಗೆ ಆಗ್ರಹಿಸುತ್ತೇವೆ’ ಎಂದು ಭಾರತೀಯ ಹೈಕಮಿಷನ್ ಬುಧವಾರ ಟ್ವೀಟ್ ಮಾಡಿದೆ.
‘ಕೆನಡಾದಲ್ಲಿರುವ ಖಾಲಿಸ್ತಾನಿ ಉಗ್ರರು ಟೊರೊಂಟೊದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ವಿರೂಪಗೊಳಿಸಿರುವುದನ್ನು ಎಲ್ಲರೂ ಖಂಡಿಸಬೇಕು. ಇದು ಕೇವಲ ಒಂದು ಘಟನೆಯಷ್ಟೇ ಅಲ್ಲ, ಕೆನಡಾದ ಹಿಂದೂ ದೇವಾಲಯಗಳು ಇತ್ತೀಚಿನ ದಿನಗಳಲ್ಲಿ ಈ ರೀತಿಯ ದ್ವೇಷದ ದಾಳಿಗೆ ಗುರಿಯಾಗುತ್ತಿವೆ. ಹಿಂದೂ ಕೆನಡಿಯನ್ನರು ಈ ಬಗ್ಗೆ ಆತಂಕ ಹೊಂದಿದ್ದಾರೆ’ ಎಂದು ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಟ್ವೀಟ್ ಮಾಡಿದ್ದಾರೆ.
ಬ್ರಾಂಪ್ಟನ್ ಸೌತ್ ಸಂಸದೆ ಸೋನಿಯಾ ಸಿಧು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ‘ಟೊರೊಂಟೊದ ಸ್ವಾಮಿನಾರಾಯಣ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯದಿಂದ ನಾನು ವಿಚಲಿತಳಾಗಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.
‘ನಾವು ಬಹುಸಂಸ್ಕೃತಿಯ ಮತ್ತು ಬಹು-ನಂಬಿಕೆಯ ಪರಿಸರದಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ಅರ್ಹರು. ಈ ಕ್ರಿಯೆಗೆ ತಕ್ಕ ಪರಿಣಾಮಗಳನ್ನು ಸಂಬಂಧಿಸಿದವರು ಎದುರಿಸಬೇಕು. ಅವರನ್ನು ಪತ್ತೆಹಚ್ಚಬೇಕು‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಿಎಪಿಎಸ್ ಸ್ವಾಮಿನಾರಾಯಣ ದೇಗುಲವು ಕೆನಡಾದ ಆಧ್ಯಾತ್ಮ ಸಂಸ್ಥೆಯಾಗಿದೆ. ಸ್ವಯಂಸೇವಾ ಮನೋಭಾವದಿಂದ ನಡೆಯುತ್ತಿರುವ ಸಂಸ್ಥೆಯು, ನಂಬಿಕೆ, ಏಕತೆ ಮತ್ತು ನಿಸ್ವಾರ್ಥ ಸೇವೆಯ ಹಿಂದೂ ಆದರ್ಶಗಳನ್ನು ಬೆಳೆಸುವ ಮೂಲಕ ಸಮಾಜವನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ.
ಇವುಗಳನ್ನೂ ಓದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.