ADVERTISEMENT

ಪರಮಾಣು ದಾಳಿ: ಉತ್ತರ ಕೊರಿಯಾ ಆಡಳಿತದ ಅಂತ್ಯಕ್ಕೆ ಕಾರಣ –ದಕ್ಷಿಣ ಕೊರಿಯಾ ಗುಡುಗು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2023, 2:51 IST
Last Updated 22 ಜುಲೈ 2023, 2:51 IST
ಕ್ಷಿಪಣಿ ಉಡಾಯಿಸುತ್ತಿರುವ ದೃಶ್ಯ
ಕ್ಷಿಪಣಿ ಉಡಾಯಿಸುತ್ತಿರುವ ದೃಶ್ಯ   

ಸೋಲ್ (ದಕ್ಷಿಣ ಕೊರಿಯಾ): ‘ಉತ್ತರ ಕೊರಿಯಾ ಕಡೆಯಿಂದ ಯಾವುದೇ ಪರಮಾಣು ದಾಳಿ ನಡೆದರೂ ಅದು ಕಿಮ್ ಜಾಂಗ್ ಉನ್ ನೇತೃತ್ವದ ಆಡಳಿತದ ಅಂತ್ಯಕ್ಕೆ ಕಾರಣವಾಗಲಿದೆ’ ಎಂದು ದಕ್ಷಿಣ ಕೊರಿಯಾ ಎಚ್ಚರಿಸಿದೆ ಎಂದು ಯೋನ್‌ಹಾಪ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಮೆರಿಕವು ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಯನ್ನು ದಕ್ಷಿಣ ಕೊರಿಯಾಕ್ಕೆ ಮಂಗಳವಾರ ರವಾನಿಸಿದೆ. ಇದರ ಬೆನ್ನಲ್ಲೇ ದಕ್ಷಿಣ ಕೊರಿಯಾವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಕುರಿತು ಉತ್ತರ ಕೊರಿಯಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕ 18,750 ಟನ್ ಅಣ್ವಸ್ತ್ರ ಸಾಮರ್ಥ್ಯದ ಖಂಡಾಂತರ ಕ್ಷಿಪಣಿ ಜಲಾಂತರ್ಗಾಮಿಯನ್ನು (ಎಸ್‌ಎಸ್‌ಬಿಎನ್‌) ದಕ್ಷಿಣ ಕೊರಿಯಾಕ್ಕೆ ಕಳುಹಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ಯೊಂಗ್‌ಯಾಂಗ್‌ ರಕ್ಷಣಾ ಸಚಿವ ಕಾಂಗ್ ಸನ್-ನಾ, ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮೈತ್ರಿಕೂಟದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ADVERTISEMENT

ಕಾಂಗ್ ಸನ್-ನಾ ಹೇಳಿಕೆ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾ, ನಮ್ಮ ಮತ್ತು ಅಮೆರಿಕ ಮೈತ್ರಿಕೂಟದ ವಿರುದ್ಧ ಉತ್ತರ ಕೊರಿಯಾ ಯಾವುದೇ ಪರಮಾಣು ದಾಳಿ ನಡೆಸಲು ಮುಂದಾದರೆ, ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಅದು ಉತ್ತರ ಕೊರಿಯಾದ ಆಡಳಿತದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದು ಮತ್ತೊಮ್ಮೆ ಬಲವಾಗಿ ಎಚ್ಚರಿಸುತ್ತೇವೆ’ ಎಂದು ಗುಡುಗಿದೆ.

ಅಮೆರಿಕ- ದಕ್ಷಿಣ ಕೊರಿಯಾ ಭದ್ರತಾ ಮಾತುಕತೆ ನಡೆಸಿದ ಮರುದಿನವೇ ಉತ್ತರ ಕೊರಿಯಾ ಬುಧವಾರ ಪೂರ್ವ ಸಮುದ್ರಕ್ಕೆ ಎರಡು ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.