ದೇರ್ ಅಲ್-ಬಲಾಹ್ (ಗಾಜಾ ಪಟ್ಟಿ): ಮಧ್ಯ ಗಾಜಾದಲ್ಲಿರುವ ಮಸೀದಿ ಮೇಲೆ ಭಾನುವಾರ ಮುಂಜಾನೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ದೇರ್ ಅಲ್ ಬಲಾಹ್ ಪಟ್ಟಣದ ಅಲ್ ಅಕ್ಸಾ ಆಸ್ಪತ್ರೆಯ ಬಳಿ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದ್ದ ಮಸೀದಿ ಮೇಲೆ ದಾಳಿ ನಡೆಸಲಾಗಿದೆ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಅಸೋಸಿಯೇಟೆಡ್ ಪ್ರೆಸ್ ಪತ್ರಕರ್ತರು ಆಸ್ಪತ್ರೆಯ ಶವಾಗಾರದಲ್ಲಿರುವ ಶವಗಳ ಲೆಕ್ಕ ಹಾಕಿದ್ದಾರೆ. ಮೃತರೆಲ್ಲರೂ ಪುರುಷರು ಎಂದು ಆಸ್ಪತ್ರೆ ದಾಖಲೆಗಳಿಂದ ತಿಳಿದುಬಂದಿದೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.
ಮಸೀದಿ ಮೇಲಿನ ದಾಳಿ ಕುರಿತಂತೆ ಇಸ್ರೇಲ್ ಮಿಲಿಟರಿಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ಸಾವುಗಳೂ ಸೇರಿ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನ್‌ನ ಜನರ ಸಂಖ್ಯೆ 42,000 ಹತ್ತಿರಕ್ಕೆ ಬಂದಿದೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.
ಹಿಜ್ಬುಲ್ಲಾ ಮತ್ತು ಹಮಾಸ್ ಬಂಡುಕೋರರನ್ನು ಗುರಿಯಾಗಿಸಿಕೊಂಡು ಶನಿವಾರ ಇಸ್ರೇಲ್ , ಲೆಬನಾನ್‌ನಲ್ಲಿ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ, ಗಾಜಾ ಮೇಲೂ ದಾಳಿ ನಡೆಸಲಾಗಿದೆ.
ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ ಪ್ಯಾ.ಲೆಸ್ಟೀನ್ ನಿರಾಶ್ರಿತರು ಸೇರಿದಂತೆ ಲೆಬನಾನ್‌ನ ಸಾವಿರಾರು ಜನರು ಬೇರೆಡೆಗೆ ವಲಸೆ ಹೋಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.