ADVERTISEMENT

ಅಭಿನಂದನ್‌ ಬಿಡುಗಡೆಗೂ ಮುನ್ನ: ಪಾಕಿಸ್ತಾನ ಸೇನಾ ಮುಖ್ಯಸ್ಥರ ಕಾಲುಗಳಲ್ಲಿ ನಡುಕ!

ಸಂಸತ್ತಿನಲ್ಲಿ ಪಾಕಿಸ್ತಾನ ಸಂಸದರೊಬ್ಬರ ಹೇಳಿಕೆ

ಏಜೆನ್ಸೀಸ್
Published 29 ಅಕ್ಟೋಬರ್ 2020, 7:28 IST
Last Updated 29 ಅಕ್ಟೋಬರ್ 2020, 7:28 IST
ವಾಘಾ ಗಡಿಯಲ್ಲಿ ವಿಂಗ್‌ ಕಮಾಂಡರ್ ಅಭಿನಂದನ್ ಮರಳಿ ಭಾರತಕ್ಕೆ ಪ್ರವೇಶಿಸುವ ಮುನ್ನ–ಸಂಗ್ರಹ ಚಿತ್ರ
ವಾಘಾ ಗಡಿಯಲ್ಲಿ ವಿಂಗ್‌ ಕಮಾಂಡರ್ ಅಭಿನಂದನ್ ಮರಳಿ ಭಾರತಕ್ಕೆ ಪ್ರವೇಶಿಸುವ ಮುನ್ನ–ಸಂಗ್ರಹ ಚಿತ್ರ   

ಇಸ್ಲಾಮಾಬಾದ್‌: ಭಾರತದಿಂದ ದಾಳಿ ಎದುರಿಸಬೇಕಾದ ಭಯದಿಂದ ಇಮ್ರಾನ್‌ ಖಾನ್‌ ಸರ್ಕಾರವು ಭಾರತೀಯ ವಾಯುಪಡೆಯ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಗಡಿಬಿಡಿಯಲ್ಲಿ ಬಿಡುಗಡೆ ಮಾಡಿತು ಎಂದು ಪಾಕಿಸ್ತಾನದ ಸಂಸದರೊಬ್ಬರು ಬುಧವಾರ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.

ಫೆ.27ರಂದು ಭಾರತದ ವಾಯುಗಡಿ ದಾಟಿ ಬಂದಿದ್ದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನಗಳನ್ನು ಮಿಗ್‌-21 ಯುದ್ಧ ವಿಮಾನದ ಮೂಲಕ ವಿಂಗ್‌ ಕಮಾಂಡರ್‌ ಅಭಿನಂದನ್‌ ಬೆನ್ನಟ್ಟಿ ಹೋಗಿದ್ದರು. ಆ ಕಾದಾಟದಲ್ಲಿ ಅಭಿನಂದನ್‌ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು ಹಾಗೂ ಅವರ ವಿಮಾನವೂ ಪತನಗೊಂಡು ಪಾಕಿಸ್ತಾನಕ್ಕೆ ಸೆರೆ ಸಿಕ್ಕಿದ್ದರು. ಅವರನ್ನು ಮಾರ್ಚ್‌ 1ರ ರಾತ್ರಿ ಪಾಕಿಸ್ತಾನವು ವಾಘಾ ಗಡಿಯ ಮೂಲಕ ಬಿಡುಗಡೆ ಮಾಡಿತ್ತು.

ಸಂಸತ್ತಿನಲ್ಲಿ ಮಾತನಾಡಿದ ಪಾಕಿಸ್ತಾನ್ ಮುಸ್ಲಿಂ ಲೀಗ್‌–ಎನ್‌ (ಪಿಎಂಎಲ್‌–ಎನ್‌) ಮುಖಂಡ ಅಯಾಝ್ ಸಾದಿಖ್, ಅಭಿನಂದನ್‌ ವರ್ಧಮಾನ್‌ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡದಿದ್ದರೆ ಭಾರತವು 'ರಾತ್ರಿ 9 ಗಂಟೆಗೆ ಪಾಕಿಸ್ತಾನದ ಮೇಲೆ ದಾಳಿ ಮಾಡಬಹುದು' ಎಂದು ಪ್ರಮುಖ ಸಭೆಯಲ್ಲಿ ವಿದೇಶಾಂಗ ಸಚಿವ ಷಾಹ್‌ ಮಹಮೂದ್‌ ಖುರೇಷಿ ಹೇಳಿದ್ದಾಗಿ ತಿಳಿಸಿದರು.

ADVERTISEMENT

ಸಾದಿಖ್ ಅವರು ಸಂಸತ್ತಿನಲ್ಲಿ ಈ ಹೇಳಿಕೆ ನೀಡಿರುವುದಾಗಿ ದುನ್ಯಾ ನ್ಯೂಸ್‌ ಪ್ರಕಟಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಪಿಪಿಪಿ ಮತ್ತು ಪಿಎಂಎಲ್‌–ಎನ್‌ ಮುಖಂಡರು ಸೇರಿದಂತೆ ಹಲವು ಸಂಸದರು, ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ ಹಾಜರಿದ್ದ ಸಭೆಯಲ್ಲಿ ಸಚಿವ ಖುರೇಷಿ ಅವರು ಅಭಿನಂದನ್‌ ಬಿಡುಗಡೆ ಮಾಡುವಂತೆ ಕೇಳಿದ್ದರು ಎಂದಿದ್ದಾರೆ.

'ನನಗೆ ನೆನಪಿದೆ ಇಮ್ರಾನ್‌ ಖಾನ್‌ ಸಭೆಯಲ್ಲಿ ಭಾಗಿಯಾಗಲು ನಿರಾಕರಿಸಿದ್ದರು, ಷಾಹ್‌ ಮಹಮೂದ್‌ ಖುರೇಷಿ ಸಭೆಯಲ್ಲಿದ್ದರು ಹಾಗೂ ಸೇನಾ ಮುಖ್ಯಸ್ಥ ಬಾಜ್ವಾ ಕೊಠಡಿಗೆ ಪ್ರವೇಶಿಸಿದರು. ಅವರ ಕಾಲುಗಳು ನಡುಗುತ್ತಿದ್ದವು ಹಾಗೂ ಬೆವರು ಸುರಿಸುತ್ತಿದ್ದರು. ಆಗ ವಿದೇಶಾಂಗ ಸಚಿವರು– ಅಭಿನಂದನ್‌ ಬಿಡುಗಡೆ ಮಾಡೋಣ, ಭಾರತವು ರಾತ್ರಿ 9ಕ್ಕೆ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಜ್ಜಾಗಿದೆ' ಎಂದಿದ್ದರು ಎಂದು ಸಾದಿಖ್‌ ಆ ಸಭೆಯ ಆಗುಹೋಗುಗಳನ್ನು ತೆರೆದಿಟ್ಟರು.

ಅಭಿನಂದನ್‌ ವಿಚಾರ ಸೇರಿದಂತೆ ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ವಿರೋಧ ಪಕ್ಷವು ಸರ್ಕಾರವನ್ನು ಬೆಂಬಲಿಸಿದೆ, ಆದರೆ ಇನ್ನು ಮುಂದೆ ಬೆಂಬಲ ನೀಡಲು ಸಾಧ್ಯವಿಲ್ಲ ಎಂದಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.