ADVERTISEMENT

ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ 1,500 ಮಂದಿ ಸಾವು: ಯೂನುಸ್‌

ರಾಯಿಟರ್ಸ್
Published 18 ನವೆಂಬರ್ 2024, 4:45 IST
Last Updated 18 ನವೆಂಬರ್ 2024, 4:45 IST
ಮೊಹಮ್ಮದ್ ಯೂನುಸ್
ಮೊಹಮ್ಮದ್ ಯೂನುಸ್   

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಕೆಳಗಿಳಿಸಲು ನಡೆಸಿದ ಪ್ರತಿಭಟನೆಯಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ ಎಂದು ಉಸ್ತುವಾರಿ ಸರ್ಕಾರದ ನಾಯಕ ಮೊಹಮ್ಮದ್ ಯೂನುಸ್ ತಿಳಿಸಿದ್ದಾರೆ.

ಬಾಂಗ್ಲಾದ ಮಧ್ಯಂತರ ಸರ್ಕಾರವು 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮೊಹಮ್ಮದ್ ಯೂನುಸ್ ಮಾತನಾಡಿದ್ದಾರೆ.

ಶೇಖ್ ಹಸೀನಾರನ್ನು ಪದಚ್ಯುತಗೊಳಿಸಲು ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟವರ ಪಟ್ಟಿಗೆ ಹೊಸ ಹೆಸರುಗಳು ಪ್ರತಿದಿನ ಸೇರ್ಪಡೆಯಾಗುತ್ತಿವೆ. ಹಿಂಸಾಚಾರಕ್ಕೆ ಕಾರಣರಾದವರನ್ನು ವಿಚಾರಣೆಗೆ ಒಳಪಡಿಸದೇ ಬಿಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

ADVERTISEMENT

ಶೇಖ್ ಹಸೀನಾ ಆಡಳಿತವನ್ನು ನಿರಂಕುಶ ಆಡಳಿತದ ಕ್ರೋಧ ಎಂದು ಉಲ್ಲೇಖಿಸಿದ ಅವರು ಸಂತ್ರಸ್ತರಿಗೆ ನ್ಯಾಯ ಒದಗಿಸಲು ನಾವು ಬದ್ಧರಿದ್ದೇವೆ ಎಂದು ಹೇಳಿದ್ದಾರೆ.

ನಾಪತ್ತೆ ಪ್ರಕರಣಗಳ ಕುರಿತು ತನಿಖೆ ನಡೆಸಿದ ಆಯೋಗವು ಅಕ್ಟೋಬರ್‌ನಲ್ಲಿ ವರದಿ ಸಲ್ಲಿಸಿದೆ. ಅದರಂತೆ ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತದಲ್ಲಿ ಸುಮಾರು 3,500ಕ್ಕೂ ಅಧಿಕ ಮಂದಿಯನ್ನು ಬಲವಂತವಾಗಿ ಅಪಹರಿಸಲಾಗಿದೆ ಎಂದು ಯೂನುಸ್ ತಿಳಿಸಿದ್ದಾರೆ.

ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ಒತ್ತಾಯಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ.

ಕಳೆದ 15 ವರ್ಷಗಳಲ್ಲಿ ಶೇಖ್ ಹಸೀನಾ ಅವರು ಮಾಡಿದ ಎಲ್ಲಾ ಅಪರಾಧ ಪ್ರಕರಣಗಳನ್ನು ನಾವು ವಿಚಾರಣೆ ನಡೆಸುತ್ತೇವೆ. ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಕಾರಣರಾದವರನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಗೆ ಕರೆತರುವ ನಮ್ಮ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.

ಕೆಲವು ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ ಬಳಿಕ ಸಾರ್ವತ್ರಿಕ ಚುನಾವಣೆಗೆ ಮಾರ್ಗಸೂಚಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸೇರಿದಂತೆ ರಾಜಕೀಯ ಪಕ್ಷಗಳು ಆದಷ್ಟು ಬೇಗ ಸಾರ್ವತ್ರಿಕ ಚುನಾವಣೆ ನಡೆಸಲು ಸ್ಪಷ್ಟ ಯೋಜನೆಗಾಗಿ ಮಧ್ಯಂತರ ಸರ್ಕಾರವನ್ನು ಒತ್ತಾಯಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.