ADVERTISEMENT

ಲಂಚ, ವಂಚನೆ ಪ್ರಕರಣ: ಅದಾನಿ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ ಅಮೆರಿಕ ನ್ಯಾಯಾಲಯ

ರಾಯಿಟರ್ಸ್
Published 21 ನವೆಂಬರ್ 2024, 4:47 IST
Last Updated 21 ನವೆಂಬರ್ 2024, 4:47 IST
<div class="paragraphs"><p>ಗೌತಮ್ ಅದಾನಿ</p></div>

ಗೌತಮ್ ಅದಾನಿ

   

ನ್ಯೂಯಾರ್ಕ್‌: ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಭಾರತದ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ಅವರ ವಿರುದ್ಧ ಅಮೆರಿಕದ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

₹2,237 ಕೋಟಿ ಲಂಚದ ಆರೋಪದಲ್ಲಿ ಗೌತಮ್ ಅದಾನಿ, ಸಾಗರ್‌ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್‌ ವಿರುದ್ಧ ಐದು ಅಂಶಗಳ ಕ್ರಿಮಿನಲ್‌ ಆರೋಪಪಟ್ಟಿಯನ್ನು ನ್ಯೂಯಾರ್ಕ್‌ನ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ಅಮೆರಿಕದ ಪ್ರಾಸಿಕ್ಯೂಟರ್‌ ಸಲ್ಲಿಸಿದ್ದರು.

ADVERTISEMENT

ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್‌ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪವು ಇವರ ಮೇಲಿದೆ.

ನ್ಯಾಯಾಲಯದ ಆದೇಶದ ಬೆನ್ನಲ್ಲೇ ₹5 ಸಾವಿರ ಕೋಟಿ ಸಂಗ್ರಹಿಸುವ ಬಾಂಡ್‌ ಬಿಡುಗಡೆ ಮಾಡುವ ಪ್ರಸ್ತಾವನೆಯಿಂದ ಅದಾನಿ ಗ್ರೀನ್ ಕಂಪನಿ ಹಿಂದೆ ಸರಿದಿದೆ ಎಂದು ವರದಿಯಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ವ್ಯವಹಾರ ನಡೆಸಿದ್ದ ಕಂಪನಿಯ ಮಾಜಿ ಅಧಿಕಾರಿಗಳಾದ ರಂಜಿತ್ ಗುಪ್ತಾ ಹಾಗೂ ರೂಪೇಶ್ ಅಗರವಾಲ್‌ ಹಾಗೂ ಕೆನಡಾ ಮೂಲದ ಹೂಡಿಕೆದಾರರಾದ ದೀಪಕ್ ಮಲ್ಹೋತ್ರಾ ಮತ್ತು ಸೌರಬ್‌ ಅಗರವಾಲ್‌ ಅವರು ಲಂಚ ನೀಡಿರುವುದು ವಿದೇಶಿ ಭ್ರಷ್ಟ ಕಾರ್ಯಾಚರಣೆ ಕಾಯ್ದೆಯಡಿ ಅಪರಾಧವಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

‘ಆರೋಪಿಗಳಾದ ಗೌತಮ್ ಎಸ್. ಅದಾನಿ, ಸಾಗರ್ ಆರ್. ಅದಾನಿ ಹಾಗೂ ವಿನೀತ್ ಎಸ್. ಜೈನ್ ಅವರು ಬಿಲಿಯನ್‌ಗಟ್ಟಲೆ ಡಾಲರ್‌ ಮೌಲ್ಯದ ಗುತ್ತಿಗೆ ಪಡೆಯಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡುವ ಮೂಲಕ ಸಂಚು ರೂಪಿಸಿದ್ದಾರೆ. ಆ ಮೂಲಕ ಅಮೆರಿಕ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರಿಂದ ಬಂಡವಾಳ ಪಡೆಯುವ ಸಂಚು ಹೊಂದಿದ್ದರು’ ಎಂದು ಅಮೆರಿಕದ ಅಟಾರ್ನಿ ಜನರಲ್‌ ಬ್ರಾನ್‌ ಪೀಸ್‌ ಹೇಳಿದ್ದಾರೆ.

ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತೆ ಭಾರತ ಸರ್ಕಾರದ ಅಧಿಕಾರಿಗಳಿಗೆ ಆರೋಪಿಗಳು ಲಂಚ ನೀಡಿದ್ದಾರೆ. ಲಂಚ ಹಾಗೂ ಭ್ರಷ್ಟಾಚಾರದ ಕುರಿತು ಸುಳ್ಳು ಹೇಳಿಕೆಗಳ ಮೂಲಕ ಅದಾನಿ ಹಾಗೂ ಇತರ ಆರೋಪಿಗಳು ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ’ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.