ADVERTISEMENT

ಇರಾನ್‌: ಮತ್ತೆ ಹಿಜಾಬ್‌ ವಿವಾದ

ಜೂನ್ 28ರಂದು ಅಧ್ಯಕ್ಷೀಯ ಚುನಾವಣೆ

ಏಜೆನ್ಸೀಸ್
Published 26 ಜೂನ್ 2024, 15:52 IST
Last Updated 26 ಜೂನ್ 2024, 15:52 IST
   

ದುಬೈ:  ಇರಾನ್ ರಾಜಧಾನಿ ಟೆಹರಾನ್‌ನ ವಿವಿಧ ವೃತ್ತಗಳು, ಅಡ್ಡ ರಸ್ತೆಗಳಲ್ಲಿ ಮಧ್ಯಾಹ್ನದ ವೇಳೆ ಪೊಲೀಸರು  ಭೇಟಿ ನೀಡಿ ಹಿಜಾಬ್‌ ಸರಿಯಾಗಿ ಧರಿಸದ ಮತ್ತು ಧರಿಸದೆಯೇ ಇರುವ ಮಹಿಳೆಯರಿಗಾಗಿ ಹುಡುಕಾಟ ನಡೆಸುವುದು ಇದೀಗ ಪ್ರತಿನಿತ್ಯದ ಬೆಳವಣಿಗೆಯಾಗಿದೆ.

ಪೊಲೀಸರ ಹಿಜಾಬ್‌ ನಿಯಮ ಧಿಕ್ಕರಿಸಿದವರನ್ನು ಹುಡುಕಿ ಶಿಕ್ಷಿಸುವುದಕ್ಕೆ ಕೆಲವು ತಿಂಗಳು ತಡೆ ಬಿದ್ದಿತ್ತು. ಅದಕ್ಕೆ ಕಾರಣವಾಗಿದ್ದು ಮಾಸಾ ಅಮೀನಿ ಎಂಬ ಯುವತಿಯ ಸಾವು. ಮಾಸಾ ಅಮೀನಿ ಎಂಬ ಯುವತಿಯನ್ನು ಹಿಬಾಜ್ ಸರಿಯಾಗಿ ಧರಿಸಿಲ್ಲ ಎನ್ನುವ ಆರೋಪದ ಮೇಲೆ ಪೊಲೀಸರು ಸೆಪ್ಟೆಂಬರ್ 2022ರಲ್ಲಿ ಬಂಧಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆಕೆ ಮೃತಪಟ್ಟಿದ್ದರು. 

ಇರಾನ್‌ನಲ್ಲಿ ಮತ್ತು ತಾಲಿಬಾನ್ ಆಡಳಿತವಿರುವ ನೆರೆಯ ಆಘ್ಗಾನಿಸ್ತಾನದಲ್ಲಿ ಹಿಬಾಜ್ ಧರಿಸುವುದು ಕಡ್ಡಾಯವಾಗಿದೆ. ಅಮೀನಿ ಸಾವಿನ ನಂತರ ನಡೆದಿದ್ದ ಹಿಂಸಾಚಾರ ಮತ್ತು ಪೊಲೀಸರ ಹಲ್ಲೆಗಳಿಂದ 500ಕ್ಕೂ ಹೆಚ್ಚು ಜನ ಮೃತಪಟ್ಟು, 22 ಸಾವಿರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.   

ADVERTISEMENT

ಅಮೀನಿ ಸತ್ತಿದ್ದು ಸರ್ಕಾರ ಆಕೆಯ ಮೇಲೆ ಎಸಗಿದ ದೈಹಿಕ ಹಿಂಸೆಯಿಂದ ಎಂದು ವಿಶ್ವಸಂಸ್ಥೆಯ ಸಮಿತಿ ಹೇಳಿತು. ನಂತರ ಕೆಲವು ತಿಂಗಳು ನೈತಿಕ ಪೊಲೀಸರು ಇರಾನ್‌ನ ಬೀದಿಗಳಿಂದ ಕಣ್ಮರೆಯಾಗಿದ್ದರು.

ಇದೀಗ ಮಹಿಳೆಯರನ್ನು ಪೊಲೀಸರು ತಮ್ಮ ವ್ಯಾನ್‌ಗಳಲ್ಲಿ ಹಾಕಿಕೊಂಡು ಹೋಗುವ ದೃಶ್ಯಗಳು ಎಲ್ಲೆಡೆ ಹರಿದಾಡತೊಡಗಿವೆ. ಪೊಲೀಸರು ಅವರನ್ನು ತೀವ್ರವಾಗಿ ಶಿಕ್ಷಿಸುತ್ತಿದ್ದಾರೆ. ಕೂದಲನ್ನು ಹಿಜಾಬ್‌ನಿಂದ ಮುಚ್ಚಿಕೊಳ್ಳದ ಮಹಿಳೆಯರ ಸಾವಿರಾರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. 

ಇರಾನ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ವಿಮಾನ ಅಪಘಾತದಲ್ಲಿ ಸಾಯುವುದಕ್ಕೆ ಮುಂಚೆಯೇ ಹಿಜಾಬ್ ನಿಯಮವನ್ನು ಧಿಕ್ಕರಿಸಿದವರಿಗಾಗಿ ಪೊಲೀಸರ ಹುಡುಕಾಟ ಆರಂಭವಾಗಿತ್ತು. ಇರಾನ್‌ನಲ್ಲಿ ಜೂನ್ 28ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದರ ಮೇಲೆ ದೇಶದಲ್ಲಿ ಮುಂದೆ ಹಿಬಾಜ್ ನಿಯಮ ಯಾವ ರೀತಿ ಜಾರಿಗೆ ಬರಲಿದೆ ಎನ್ನುವುದು ನಿರ್ಧಾರವಾಗಲಿದೆ.

ಚುನಾವಣೆ ಬಹಿಷ್ಕಾರಕ್ಕೆ ಕರೆ

ಅಧ್ಯಕ್ಷ ಚುನಾವಣೆಯ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಪೆಜೆಸ್ಕಿಯಾನ್‌ ಮಾತ್ರವೇ ಹಿಜಾಬ್ ನಿಯಮವನ್ನು ಟೀಕಿಸಿರುವುದು. ಉಳಿದಂತೆ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಕ್ವಾಲಿಬಫ್‌ ನಿಯಮವನ್ನು ಸೂಕ್ಷ್ಮ ರೀತಿಯಲ್ಲಿ ಜಾರಿ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಮೊಸ್ತಾಫಾ ಪೌರ್‌ಮೊಹಮ್ಮದಿ ಮಹಿಳೆಯರ ಮೇಲಿನ ಹಿಂಸೆಯನ್ನು ಖಂಡಿಸಿದ್ದು ಪೊಲೀಸರು ದಂಡನೆಯ ಮಾರ್ಗ ಬಿಟ್ಟು ವಿಶ್ವಾಸ ಮತ್ತು ನಂಬಿಕೆಯ ದಾರಿ ಅನುಸರಿಸಬೇಕು ಎಂದಿದ್ದಾರೆ.  ಇನ್ನೊಂದೆಡೆ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯಾಗಿರುವ ಮಹಿಳಾ ಹಕ್ಕು ಹೋರಾಟಗಾರ್ತಿ ನರ್ಗೀಸ್ ಮೊಹಮ್ಮದಿ ಅಧ್ಯಕ್ಷ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಜೈಲಿನಿಂದಲೇ ಕರೆ ನೀಡಿದ್ದು ಸರ್ಕಾರವು ದಮನ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಮಾತ್ರವೇ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.