ನವದೆಹಲಿ: ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರು ಗಲ್ಲಿಗೇರುವುದರಿಂದ ಪಾರಾಗಲು, ಜೀವ ಉಳಿಸಿಕೊಳ್ಳಲು ದೇಶದಿಂದ ಪಲಾಯನ ಮಾಡಿದ್ದರು ಎಂದು ಅಫ್ಗಾನಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮೊಹಿಬ್ ಹೇಳಿದ್ದಾರೆ ಎಂದು ಮಾಧ್ಯಮ ಸಂಸ್ಥೆ ‘ಟೊಲೊ ನ್ಯೂಸ್’ ವರದಿ ಮಾಡಿದೆ.
‘ರೇಡಿಯೋ ಲಿಬರ್ಟಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
2020ರ ಫೆಬ್ರವರಿ 29 ರಂದು ಅಮೆರಿಕ ಮತ್ತು ತಾಲಿಬಾನ್ ನಡುವೆ ಒಪ್ಪಂದ ಏರ್ಪಡುವುದರೊಂದಿಗೆ ಅಫ್ಗಾನಿಸ್ತಾನದ ಪತನ ಪ್ರಾರಂಭವಾಯಿತು ಎಂದೂ ಮೊಹಿಬ್ ಹೇಳಿದ್ದಾರೆ.
ಘನಿ ಅವರ ಪಲಾಯನ ಅನಿರೀಕ್ಷಿತವಾಗಿತ್ತು. ಅಧಿಕಾರ ಹಸ್ತಾಂತರ ಕುರಿತು ತಾಲಿಬಾನ್ ಜೊತೆ ಒಪ್ಪಂದಕ್ಕೆ ಬರಲು ನಿಯೋಗವು ಅದೇ ದಿನ ದೋಹಾಕ್ಕೆ ಭೇಟಿ ನೀಡಲಿತ್ತು ಎಂದು ಹೇಳಿದ್ದಾರೆ.
‘ಲೋಯಾ ಜಿರ್ಗಾ (ರಾಷ್ಟ್ರೀಯ ಸಂಸತ್) ಅನ್ನು ಕರೆಯುವ ಬಗ್ಗೆ ಮತ್ತು ಅಧಿಕಾರದ ಹಸ್ತಾಂತರದ ಬಗ್ಗೆ ತಾಲಿಬಾನ್ ಜೊತೆ ಮಾತುಕತೆ ನಡೆಸಲು ನಾವು ದೋಹಾಕ್ಕೆ ತೆರಳುವುದರಲ್ಲಿದ್ದೆವು,’ ಎಂದು ಮೊಹಿಬ್ ಹೇಳಿದರು.
ತಾವು ಅಮೆರಿಕದಲ್ಲಿ ನೆಲೆಸಿರುವುದಾಗಿ ಹೇಳಿರುವ ಮೊಹಿಬ್, ಘನಿ ಇನ್ನೂ ಯುಎಇಯಲ್ಲೇ ಇದ್ದಾರೆ ಎಂದು ತಿಳಿಸಿದರು.
ಆಗಸ್ಟ್ 15 ರಂದು ಕಾಬೂಲ್ ತಾಲಿಬಾನ್ ಸಂಘಟನೆಗಳ ವಶವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.