ಲಂಡನ್: ‘ಕಂಪನಿ ಉತ್ಪಾದಿಸಿರುವ ಕೋವಿಡ್–19 ಲಸಿಕೆಯು ‘ಬಹಳ ಅಪರೂಪದ ಪ್ರಕರಣಗಳಲ್ಲಿ’ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು’ ಎಂಬುದನ್ನು ಬ್ರಿಟನ್‌ನ ಪ್ರಮುಖ ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ (ಎಝೆಡ್) ಒಪ್ಪಿಕೊಂಡಿದೆ ಎಂದು ‘ದಿ ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ.
ಲಂಡನ್ ಹೈಕೋರ್ಟ್‌ಗೆ ಅಸ್ಟ್ರಾಜೆನೆಕಾ ಕಂಪನಿಯು ಫೆಬ್ರುವರಿಯಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಉಲ್ಲೇಖಿಸಿ ಪತ್ರಿಕೆಯು ವರದಿ ಮಾಡಿದೆ.
ಅಸ್ಟ್ರಾಜೆನೆಕಾ ಕಂಪನಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನೆರವಿನೊಂದಿಗೆ ಕೋವಿಡ್–19 ವಿರುದ್ಧದ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಬ್ರಿಟನ್‌ನಲ್ಲಿ ಈ ಲಸಿಕೆಯನ್ನು ‘ವ್ಯಾಕ್ಸ್‌ಜೆವ್‌ರಿಯಾ’ ಹೆಸರಿನಲ್ಲಿ ಉತ್ಪಾದಿಸಲಾಗುತ್ತದೆ.
ಭಾರತದಲ್ಲಿ ಪುಣೆ ಮೂಲದ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ), ‘ಕೋವಿಶೀಲ್ಡ್’ ಹೆಸರಿನಲ್ಲಿ ಈ ಲಸಿಕೆಯನ್ನು ತಯಾರಿಸುತ್ತಿದೆ.
‘ಕೋವಿಡ್–19 ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು ತೀರ ವಿರಳ ಪ್ರಕರಣಗಳಲ್ಲಿ ಟಿಟಿಎಸ್‌ಗೆ (ಥ್ರೋಂಬೊಸಿಸ್ ವಿತ್ ಥ್ರೋಂಬೊಸೈಟೊಪಿನಿಯಾ ಸಿಂಡ್ರೋಮ್) ಕಾರಣವಾಗುತ್ತದೆ’ ಎಂದು ಕಂಪನಿಯು ಹೈಕೋರ್ಟ್‌ಗೆ ಸಲ್ಲಿಸಿರುವ ದಾಖಲೆಗಳಲ್ಲಿ ವಿವರಿಸಿದೆ.
ಕಂಪನಿಯ ಲಸಿಕೆಯಿಂದಾಗಿ ಟಿಟಿಎಸ್ ತೊಂದರೆಯಿಂದ ಬಳಲುತ್ತಿರುವವರು ಹಾಗೂ ಅವರ ಸಂಬಂಧಿಕರು ಸೇರಿದಂತೆ 51 ಜನರು ಕಂಪನಿ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಮಿದುಳು ಅಥವಾ ದೇಹದ ಇತರ ಅಂಗಗಳಲ್ಲಿ ರಕ್ತಹೆಪ್ಪುಗಟ್ಟುವುದು ಹಾಗೂ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾಗುವುದನ್ನು ಟಿಟಿಎಸ್ ಎಂದು ಕರೆಯಲಾಗುತ್ತದೆ. ಕೆಲ ನಿರ್ದಿಷ್ಟ ಪ್ರಕಾರದ ಲಸಿಕೆಗಳಿಂದ ಈ ತೊಂದರೆ ಕಾಣಿಸಿಕೊಳ್ಳುತ್ತದೆ.
‘ತಾನು ಅಭಿವೃದ್ಧಿಪಡಿಸಿ, ತಯಾರಿಸಿರುವ ಲಸಿಕೆಯು ತೀರ ವಿರಳ ಪ್ರಕರಣಗಳಲ್ಲಿ ಟಿಟಿಎಸ್‌ಗೆ ಕಾರಣವಾಗುತ್ತದೆ. ಆದರೆ, ಇಂತಹ ಅಡ್ಡಪರಿಣಾಮಕ್ಕೆ ಕಾರಣವಾದ ಅಂಶಗಳೇನು ಎಂಬುದು ಗೊತ್ತಾಗಿಲ್ಲ. ಕಂಪನಿಯ ಲಸಿಕೆಯನ್ನು ನೀಡದಿದ್ದ ಸಂದರ್ಭದಲ್ಲಿಯೂ ಟಿಟಿಎಸ್ ಕಂಡಬರಬಹುದು. ಹೀಗಾಗಿ, ಯಾವುದೇ ನಿರ್ದಿಷ್ಟ ಪ್ರಕರಣದಲ್ಲಿ ಕಂಡುಬರುವ ಅಡ್ಡಪರಿಣಾಮಗಳಿಗೆ ಕಾರಣವಾಗುವ ಅಂಶಗಳು ಪತ್ತೆಯಾದಾಗ, ಅವು ಪ್ರಮುಖ ಪುರಾವೆಗಳೆನಿಸುತ್ತವೆ’ ಎಂದು ಕಂಪನಿಯ ದಾಖಲೆಗಳಲ್ಲಿನ ಈ ಮಾಹಿತಿಯನ್ನು ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
‘ತನ್ನ ಲಸಿಕೆಯಿಂದ ಟಿಟಿಎಸ್‌ನಂತಹ ಗಂಭೀರ ಅಡ್ಡಪರಿಣಾಮ ಉಂಟಾಗಲಿದೆ ಎಂಬುದನ್ನು ಅಸ್ಟ್ರಾಜೆನೆಕಾ ಈಗ ಒಪ್ಪಿಕೊಳ್ಳುತ್ತಿರುವುದನ್ನು ಕೇಳಿ ಗಾಬರಿಯಾಗುತ್ತದೆ. ಈ ಲಸಿಕೆಯ ವ್ಯಾಪಕ ಬಳಕೆಗೆ ಅನುಮತಿ ನೀಡುವುದಕ್ಕೆ ಮುನ್ನವೇ ಕಂಪನಿಗೆ ಇದರ ಅರಿವು ಇರಬೇಕಿತ್ತು’ ಎಂದು ಭಾರತೀಯ ಬ್ರಿಟಿಷ್ ಹೃದ್ರೋಗತಜ್ಞ ಡಾ.ಅಸೀಮ್ ಮಲ್ಹೋತ್ರ ಪ್ರತಿಕ್ರಿಯಿಸಿದ್ದಾರೆ.
ಡಾ.ಮಲ್ಹೋತ್ರ ಅವರು, ಅಸ್ಟ್ರಾಜೆನೆಕಾ ಕಂಪನಿಯ ಲಸಿಕೆಯಿಂದಾಗುವ ಅಡ್ಡಪರಿಣಾಮಗಳ ವಿರುದ್ಧ ಧ್ವನಿ ಎತ್ತಿರುವವರಲ್ಲಿ ಪ್ರಮುಖರಾಗಿದ್ದಾರೆ.
18 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದವರಿಗೆ ಈ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.