ಲಂಡನ್/ನವದೆಹಲಿ: ಬ್ರಿಟನ್ ಮೂಲದ ಔಷಧ ತಯಾರಿಕಾ ಕಂಪನಿ ಆಸ್ಟ್ರಾಜೆನೆಕಾ ತಾನು ತಯಾರಿಸುವ ಕೋವಿಡ್ ಲಸಿಕೆಗಳನ್ನು ಜಾಗತಿಕವಾಗಿ ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಆರಂಭಿಸಿದೆ. ಈ ಕಂಪನಿಯು ಭಾರತದಲ್ಲಿ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಹಯೋಗದಲ್ಲಿ ತಯಾರಿಸಿದ ಲಸಿಕೆಯನ್ನು ‘ಕೋವಿಶೀಲ್ಡ್’ ಹೆಸರಿನಲ್ಲಿ ನೀಡಲಾಗಿತ್ತು.
ತಾನು ಸಿದ್ಧಪಡಿಸಿದ ಕೋವಿಡ್ ಲಸಿಕೆ ಪಡೆದುಕೊಂಡವರಲ್ಲಿ, ಅಪರೂಪದ ಪ್ರಕರಣಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ ಹಾಗೂ ಪ್ಲೇಟ್‌ಲೇಟ್ ಇಳಿಕೆಯ ಅಡ್ಡಪರಿಣಾಮ ಉಂಟಾಗಬಹುದು ಎಂದು ಒಪ್ಪಿಕೊಂಡ ಕೆಲವೇ ದಿನಗಳಲ್ಲಿ ಕಂಪನಿಯು ಈ ಕ್ರಮಕ್ಕೆ ಮುಂದಾಗಿದೆ.
ಪರಿಷ್ಕರಣೆ ಕಂಡಿರುವ ಲಸಿಕೆಗಳು ಹೇರಳ ಪ್ರಮಾಣದಲ್ಲಿ ಲಭ್ಯವಿರುವ ಕಾರಣಕ್ಕೆ ತನ್ನ ಲಸಿಕೆಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ಆಸ್ಟ್ರಾಜೆನೆಕಾ ಕಂಪನಿಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೊತೆಗೂಡಿ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಈ ಲಸಿಕೆಗಳನ್ನು ಯುರೋಪಿನಲ್ಲಿ ವ್ಯಾಕ್ಸ್‌ಜೆವ್ರಿಯಾ ಹೆಸರಿನಲ್ಲಿ, ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಮಾರಾಟ ಮಾಡಲಾಗಿತ್ತು.
27 ಸದಸ್ಯ ರಾಷ್ಟ್ರಗಳ ಐರೋಪ್ಯ ಒಕ್ಕೂಟದಲ್ಲಿ ವ್ಯಾಕ್ಸ್‌ಜೆವ್ರಿಯಾ ಲಸಿಕೆಯ ಬಳಕೆಗೆ ಮಾನ್ಯತೆ ಇಲ್ಲ ಎಂದು ಐರೋಪ್ಯ ಔಷಧಗಳ ಸಂಸ್ಥೆ ಮಂಗಳವಾರ ಖಚಿತಪಡಿಸಿದೆ.
ಜಾಗತಿಕವಾಗಿ ನಾವು ಔಷಧ ನಿಯಂತ್ರಣ ಪ್ರಾಧಿಕಾರಗಳ ಜೊತೆಗೂಡಿ, ಲಸಿಕೆಗೆ ಮುಂದೆ ವಾಣಿಜ್ಯ ಬೇಡಿಕೆ ಬರುವುದಿಲ್ಲ ಎಂದು ಗುರುತಿಸಿರುವ ಕಡೆಗಳಲ್ಲಿ ವಾಕ್ಸ್‌ಜೆವ್ರಿಯಾ ಮಾರಾಟದ ಮಾನ್ಯತೆಯನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಲಿದ್ದೇವೆ’ ಎಂದು ಕಂಪನಿ ಹೇಳಿರುವುದಾಗಿ ‘ದಿ ಡೈಲಿ ಟೆಲಿಗ್ರಾಫ್’ ವರದಿ ಮಾಡಿದೆ.
ಇದಕ್ಕೂ ಮೊದಲು, ತಾನು ಸಿದ್ಧಪಡಿಸಿದ ಕೋವಿಡ್ ಲಸಿಕೆಗಳು ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್ ಅಡ್ಡಪರಿಣಾಮ ಬೀರಬಲ್ಲವು ಎಂಬುದನ್ನು ಆಸ್ಟ್ರಾಜೆನೆಕಾ ಕಂಪನಿಯು ಒಪ್ಪಿಕೊಂಡಿದೆ ಎಂದು ಜಾಗತಿಕ ಮಟ್ಟದಲ್ಲಿ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ಭಾರತದಲ್ಲಿ 220 ಕೋಟಿ ಡೋಸ್‌ಗಿಂತ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಈ ಪೈಕಿ ಕೋವಿಶೀಲ್ಡ್ ಲಸಿಕೆಗಳ ಸಂಖ್ಯೆಯೇ ಹೆಚ್ಚು. ‘ಕೋವಿಡ್‌ಗೆ ಹಲವು ಬಗೆಯ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಪರಿಷ್ಕೃತ ಲಸಿಕೆಗಳು ಹೇರಳವಾಗಿ ಲಭ್ಯವಿವೆ. ಇದರ ಪರಿಣಾಮವಾಗಿ ವ್ಯಾಕ್ಸ್‌ಜೆವ್ರಿಯಾ ಲಸಿಕೆಗೆ ಬೇಡಿಕೆ ತಗ್ಗಿದೆ. ಈ ಲಸಿಕೆಯನ್ನು ಈಗ ತಯಾರಿಸಲಾಗುತ್ತಿಲ್ಲ, ಪೂರೈಕೆ ಮಾಡುತ್ತಿಲ್ಲ’ ಎಂದು ಕಂಪನಿ ತಿಳಿಸಿದೆ.
ಜಾಗತಿಕ ಸಾಂಕ್ರಾಮಿಕವನ್ನು ಕೊನೆಗಾಣಿಸುವಲ್ಲಿ ವ್ಯಾಕ್ಸ್‌ಜೆವ್ರಿಯಾ ಲಸಿಕೆಯು ವಹಿಸಿದ ಪಾತ್ರದ ಬಗ್ಗೆ ತನಗೆ ಬಹಳ ಹೆಮ್ಮೆ ಇದೆ ಎಂದು ಕಂಪನಿ ಹೇಳಿದೆ. ‘ಸ್ವತಂತ್ರವಾದ ಅಂದಾಜುಗಳ ಪ್ರಕಾರ ಮೊದಲ ವರ್ಷದಲ್ಲಿಯೇ 65 ಲಕ್ಷಕ್ಕೂ ಹೆಚ್ಚು ಜನರ ಪ್ರಾಣ ಉಳಿಸಲಾಗಿದೆ’ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.