ಕಾಬುಲ್: ಅಫ್ಗಾನಿಸ್ತಾನದ ಉತ್ತರ ಭಾಗದ ಬಘ್ಲನ್ ಪ್ರಾಂತ್ಯದ ಸೂಫಿ ಮಸೀದಿಯೊಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಮತೀನ್ ಖೈನಿ ಶುಕ್ರವಾರ ಹೇಳಿದ್ದಾರೆ.
ದಾಳಿಯ ಹಿಂದೆ ಯಾರ ಕೈವಾಡ ಇದೆ ಎನ್ನುವುದು ತಿಳಿದುಬಂದಿಲ್ಲ.
‘ಗುರುವಾರ ಸಂಜೆ ಸಯ್ಯದ್ ಪಾಚಾ ಆಗಾ ಮಸೀದಿಯಲ್ಲಿ ಸೂಫಿಗಳು ನೆರೆದಿದ್ದರು. ಸೂಫಿ ಗಾಯನದ ವೇಳೆಯೇ ದಾಳಿ ನಡೆದಿದೆ’ ಎಂದು ತಮ್ಮ ಹೆಸರನ್ನು ಗೋಪ್ಯವಾಗಿಡಬೇಕು ಎನ್ನುವ ಷರತ್ತಿನೊಂದಿಗೆ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಶುಕ್ರವಾರ ಮುಂಜಾನೆ ಪ್ರಾರ್ಥನೆಗೆ ಜನ ಮಸೀದಿಗೆ ಬಂದಾಗ ದೇಹಗಳು ಬಿದ್ದಿರುವುದು ಕಂಡಿದೆ’ ಎಂದು ಅವರು ಹೇಳಿದ್ದಾರೆ.
ಯುದ್ಧ ಪೀಡಿತ ಅಫ್ಗಾನಿಸ್ತಾನದ ಆಡಳಿತ ಚುಕ್ಕಾಣಿಯನ್ನು 2021ರಲ್ಲಿ ತಾಲಿಬಾನ್ ವಹಿಸಿಕೊಂಡಿತ್ತು. ಆ ಬಳಿಕ ಸೂಫಿಗಳನ್ನು ಗುರಿಯಾಗಿಸಿಕೊಂಡು ಇಂಥ ದಾಳಿಗಳು ಹೆಚ್ಚಾಗಿವೆ.
ಸ್ಥಳೀಯ ಉಗ್ರಗಾಮಿ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್) ಈ ದಾಳಿ ನಡೆಸಿದ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಕೇಂದ್ರ ಅಫ್ಗಾನಿಸ್ತಾನದಲ್ಲಿ ನಡೆದ ದಾಳಿಯಿಲ್ಲಿ 14 ಮಂದಿ ಸಾವಿಗೀಡಾಗಿದ್ದರು. ಈ ದಾಳಿಯ ಹೊಣೆಯನ್ನು ಐಎಸ್ ಹೊತ್ತುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.