ಬೊಗೋಟಾ: ಕೊಲಂಬಿಯಾದ ವಾಯವ್ಯ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ, ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಭೂ ಕುಸಿತದಲ್ಲಿ 17 ಮಂದಿ ಮೃತಪಟ್ಟಿದ್ದು, 35 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪೆಸಿಫಿಕ್ ಪ್ರಾಂತ್ಯದ ಚೋಕೊದಲ್ಲಿ ಭೂ ಕುಸಿತವಾಗಿದ್ದು, ಕ್ವಿಬ್ಡೊ–ಮೆಡೆಲಿನ್ ನಗರಗಳನ್ನು ಸಂಪರ್ಕಿಸುವ ಹೆದ್ದಾರಿಯನ್ನು ಮಣ್ಣು ಆವರಿಸಿದೆ. ವಾಹನ ದಟ್ಟಣೆಯ ಈ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರುಗಳು ಮಣ್ಣಿನಡಿ ಸಿಲುಕಿರುವುದರಿಂದ, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಇದೂವರೆಗೆ ದುರಂತ ನಡೆದ ಸ್ಥಳದಿಂದ 17 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಚೋಕೊ ಸರ್ಕಾರ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.
ಪರ್ವತದ ದೊಡ್ಡ ಭಾಗವೊಂದು ಕುಸಿದು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಹಲವು ಕಾರುಗಳ ಮೇಲೆ ಬೀಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೊಲಂಬಿಯಾದ ವಿಪತ್ತು ನಿರ್ವಹಣೆಯ ರಾಷ್ಟ್ರೀಯ ಘಟಕವು ಈ ಹೆದ್ದಾರಿಯನ್ನು ಮುಚ್ಚಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.