ಲಂಡನ್: ಮಧ್ಯ ಕಜಕಸ್ತಾನದ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಅಗ್ನಿ ಅನಾಹುತ ಸಂಭವಿಸಿ ಕನಿಷ್ಠ 21 ಮಂದಿ ಕಾರ್ಮಿಕರು ಮೃತಪಟ್ಟಿದ್ದು, 25 ಮಂದಿ ನಾಪತ್ತೆಯಾಗಿದ್ದಾರೆ.
ಕೊಸ್ಟೆಂಕೊ ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅನಾಹುತ ಸಂಭವಿಸುವ ವೇಳೆ 252 ಮಂದಿ ಕೆಲಸ ಮಾಡುತ್ತಿದ್ದರು ಎಂದು ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಕಂಪನಿ ತಿಳಿಸಿದೆ.
ಮಿಥೇನ್ ಅನಿಲದ ಶೇಖರಣೆಯು ಅಗ್ನಿ ಅನಾಹುತಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಲಕ್ಸ್‌ಂಬರ್ಗ್ ಮೂಲದ ಬಹುರಾಷ್ಟ್ರೀಯ ಆರ್ಸೆಲರ್ ಮಿತ್ತಲ್ ಕಂಪನಿಯ ಅಂಗ ಸಂಸ್ಥೆಯಾಗಿರುವ ಆರ್ಸೆಲರ್ ಮಿತ್ತಲ್ ಟೆಮಿರ್ಟೌನ ಅಧೀನದಲ್ಲಿ ಕಜಕಸ್ತಾನದ ಕರಗಂಡ ಪ್ರದೇಶದಲ್ಲಿ ಎಂಟು ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸುತ್ತಿವೆ.
ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಜೊತೆಗಿನ ‘ಹೂಡಿಕೆ ಸಹಕಾರ’ವನ್ನು ನಿಲ್ಲಿಸುವುದಾಗಿ ಕಜಾಕಸ್ತಾನದ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಹೇಳಿದ್ದಾರೆ. ಕಜಕಸ್ತಾನ ಸರ್ಕಾರವು ದುರಂತದ ಕುರಿತು ತನಿಖೆಗೆ ಆದೇಶಿಸಿದೆ.
ಇದೇ ಗಣಿಯಲ್ಲಿ ಆಗಸ್ಟ್‌ನಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ನಾಲ್ವರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.