ADVERTISEMENT

Uganda: ಶಾಲೆ ಮೇಲೆ ಬಂಡುಕೋರರ ದಾಳಿ: 38 ವಿದ್ಯಾರ್ಥಿಗಳು ಸೇರಿ 41 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 17 ಜೂನ್ 2023, 15:19 IST
Last Updated 17 ಜೂನ್ 2023, 15:19 IST
   

ಕಂಪಾಲ; ಕಾಂಗೋ ಗಡಿ ಸಮೀಪದ ಮಾಧ್ಯಮಿಕ ಶಾಲೆ ಮೇಲೆ ಶಂಕಿತ ಬಂಡುಕೋರರು ದಾಳಿ ನಡೆಸಿದ ಪರಿಣಾಮ 38 ವಿದ್ಯಾರ್ಥಿಗಳು ಸೇರಿದಂತೆ 41 ಜ‌ನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೇಯರ್ ಶನಿವಾರ ತಿಳಿಸಿದ್ದಾರೆ.

ಮೃತರಲ್ಲಿ ವಿದ್ಯಾರ್ಥಿಗಳು, ಒಬ್ಬ ಗಾರ್ಡ್ ಮತ್ತು ಸ್ಥಳೀಯ ಸಮುದಾಯದ ಇಬ್ಬರು ಸದಸ್ಯರು ಸೇರಿದ್ದಾರೆ. ಗಾಯಗೊಂಡಿರುವ ಎಂಟು ಮಂದಿ  ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ನಡೆದ ದಾಳಿಯಲ್ಲಿ ಸುಮಾರು ಐದು ದಾಳಿಕೋರರು ಭಾಗಿಯಾಗಿದ್ದರು, ಆರು ಮಂದಿಯನ್ನು ಅಪಹರಿಸಲಾಗಿದೆ ಎಂದು ಉಗಾಂಡ ಸೇನೆ ತಿಳಿಸಿದೆ.

ADVERTISEMENT

 ಬಂಡುಕೋರರು ವಿದ್ಯಾರ್ಥಿ ನಿಲಯಕ್ಕೆ ಬೆಂಕಿ ಹಚ್ಚಿದ್ದರಿಂದ ಕೆಲವು ವಿದ್ಯಾರ್ಥಿಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಇತರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಅಥವಾ ಮಚ್ಚುಗಳಿಂದ ಕತ್ತರಿಸಲಾಗಿದೆ ಎಂದು ಎಂಪೊಂಡ್ವೆ-ಲುಬಿರಿಹಾ ಮೇಯರ್ ಸೆಲೆವೆಸ್ಟ್ ಮಾಪೋಜ್ ಹೇಳಿದ್ದಾರೆ.  

ಅಲೈಡ್ ಡೆಮಾಕ್ರಟಿಕ್ ಫೋರ್ಸ್‌ ಬಂಡುಕೋರರು ಗಡಿ ಪಟ್ಟಣ ಎಂಪೊಂಡ್ವೆಯಲ್ಲಿರುವ ಲುಬಿರಿಹಾ ಶಾಲೆ ಮೇಲೆ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿ ನಿಲಯಕ್ಕೆ ಬೆಂಕಿ‌ ಹೆಚ್ಚಿ, ಆಹಾರ ಮಳಿಗೆಯನ್ನು ಲೂಟಿ ಮಾಡಿದ್ದಾರೆ . ಈವರೆಗೆ 25 ಶವಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗೋದ ವಿರುಂಗ ರಾಷ್ಟ್ರೀಯ ಉದ್ಯಾನದಲ್ಲಿ ಬಂಡುಕೋರರನ್ನು ಉಗಾಂಡ ಸೈನಿಕರು ಪತ್ತೆ ಹಚ್ಚಿದ್ದು,  ಅಪಹರಣಕ್ಕೆ ಒಳಗಾದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸೇನೆ ಹೇಳಿಕೆಯಲ್ಲಿ ದೃಢಪಡಿಸಿದೆ. 

ಈ ಪ್ರದೇಶದ ಪ್ರಭಾವಿ ರಾಜಕೀಯ ನಾಯಕಿ ವಿನ್ನಿ ಕಿಜಾ ಅವರು, ‘ಇದು ಹೇಡಿತನದ ದಾಳಿ’ ಎಂದು  ಟ್ವಿಟರ್‌ನಲ್ಲಿ ಖಂಡಿಸಿದ್ದಾರೆ. ಶಾಲೆಗಳ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಶಾಲೆಗಳು ಯಾವಾಗಲೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳವಾಗಿರಬೇಕು ಎಂದು ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.