ಕರಾಚಿ (ಪಾಕಿಸ್ತಾನ): ‘ಕರಾಚಿಯ ಖಾಸಿಂ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಲು ಯತ್ನಿಸಿದ ಶಂಕಿತ ಆತ್ಮಾಹುತಿ ಬಾಂಬ್ ದಾಳಿಕೋರನನ್ನು ಹತ್ಯೆ ಮಾಡಿದ್ದು, ಆತನ ಯೋಜನೆಯನ್ನು ವಿಫಲಗೊಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಈ ಘಟನೆ ಬುಧವಾರ ನಡೆದಿದೆ. ಶಂಕಿತನೊಬ್ಬ ಚೀನಾ ಪ್ರಜೆಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದನ್ನು ಪತ್ತೆಹಚ್ಚಿದ ಖಾಸಿಂ ಬಂದರಿನ ಭದ್ರತಾ ಸಿಬ್ಬಂದಿ ಆತನನ್ನು ಕೊಂದಿದ್ದಾರೆ’ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹಸನ್ ಸರ್ದಾರ್ ತಿಳಿಸಿದರು.
‘ನಿಷೇಧಿತ ಸಂಘಟನೆಯೊಂದು ಮಂಗಳವಾರ ಭಯೋತ್ಪಾದಕ ಕೃತ್ಯ ನಡೆಸಲು ಯೋಜಿಸಿದೆ ಎಂದು ಗುಪ್ತಚರ ಇಲಾಖೆ ಸುಳಿವು ನೀಡಿದ ಬಳಿಕ, ಪೊಲೀಸರು ವಿದೇಶಿ ಕಾರ್ಮಿಕರ ಭದ್ರತೆಯನ್ನು ಹೆಚ್ಚಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ’ ಎಂದರು.
‘ಶಂಕಿತ ಭಯೋತ್ಪಾದಕನಿಂದ ಜಾಕೆಟ್, ಸ್ಫೋಟಕಗಳು, ಒಂದು ಡಿಟೋನೇಟರ್, ಬಂದೂಕು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಯೋತ್ಪಾದಕ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಸಿಬ್ಬಂದಿಗೆ ಗಾಯವಾಗಿದೆ’ ಎಂದೂ ಅವರು ವಿವರಿಸಿದರು.
‘ಈ ಘಟನೆ ಬಳಿಕ, ವಿದೇಶಿ ಕಾರ್ಮಿಕರಿಗೆ ನೀಡಿರುವ ಭದ್ರತೆಯನ್ನು ಹಾಗೂ ಗುಪ‍್ತಚರ ಕಣ್ಗಾವಲನ್ನು ಹೆಚ್ಚಿಸಲು ಉಭಯ ಸರ್ಕಾರಗಳು ಒಪ್ಪಿಕೊಂಡಿವೆ’ ಎಂದು ಸರ್ದಾರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.