ADVERTISEMENT

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ, ರಾಜಕೀಯಪ್ರೇರಿತ: ಯೂನಸ್

ಪಿಟಿಐ
Published 5 ಸೆಪ್ಟೆಂಬರ್ 2024, 10:14 IST
Last Updated 5 ಸೆಪ್ಟೆಂಬರ್ 2024, 10:14 IST
<div class="paragraphs"><p>ಮೊಹಮ್ಮದ್ ಯೂನಸ್</p></div>

ಮೊಹಮ್ಮದ್ ಯೂನಸ್

   

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಕೋಮು ದ್ವೇಷವಲ್ಲ, ಘಟನೆಯನ್ನು ಉತ್ಪ್ರೇಕ್ಷೆ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಹೇಳಿದ್ದಾರೆ.

ಇದೇವೇಳೆ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ದಾಳಿಯ ಘಟನೆಗಳನ್ನು ಭಾರತವು ಬಿಂಬಿಸಿದ ರೀತಿಯನ್ನು ಪ್ರಶ್ನಿಸಿದ್ದಾರೆ.

ADVERTISEMENT

ಢಾಕಾದ ತಮ್ಮ ಅಧಿಕೃತ ನಿವಾಸದಲ್ಲಿ ಪಿಟಿಐ ಸಂದರ್ಶನದಲ್ಲಿ ಮಾತನಾಡಿರುವ ಅವರು, ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಕೋಮುದ್ವೇಷವಲ್ಲ, ರಾಜಕೀಯಪ್ರೇರಿತ ಎಂದು ಹೇಳಿದ್ದಾರೆ.

ದೇಶದಲ್ಲಿ ನಡೆದ ದಾಳಿಗಳು ಕೋಮು ದ್ವೇಷದಿಂದ ನಡೆದಿದ್ದಲ್ಲ. ಈಗ ಪತನಗೊಂಡಿರುವ ಅವಾಮಿ ಲೀಗ್ ಸರ್ಕಾರದ ಬಹಳಷ್ಟು ಬೆಂಬಲಿಗರು ಹಿಂದೂಗಳಾಗಿದ್ದರು. ಅವರ ಮೇಲೆ ನಡೆದ ದಾಳಿಗಳನ್ನು ರಾಜಕೀಯ ಉದ್ದೇಶದಿಂದ ಕೋಮು ದ್ವೇಷದ ದಾಳಿ ಎಂದು ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

‘ಈ ದಾಳಿಗಳು ರಾಜಕೀಯಪ್ರೇರಿತವಾಗಿ ನಡೆಯುತ್ತಿವೆಯೇ ಹೊರತು ಕೋಮು ದ್ವೇಷದಿಂದಲ್ಲ. ಈ ಘಟನೆಗಳ ಬಗ್ಗೆ ಭಾರತ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ಮಾಡಿದೆ. ದಾಳಿ ತಡೆಯಲು ನಾವು ಏನನ್ನೂ ಮಾಡುವುದಿಲ್ಲ ಎಂದು ಹೇಳಿಲ್ಲ. ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ’ಎಂದಿದ್ದಾರೆ.

ಭಾರತದ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಇಚ್ಛೆ ಇದೆ ಎಂದಿರುವ ಯೂನಸ್, ಹಸೀನಾ ಇಲ್ಲದಿದ್ದರೆ ಬಾಂಗ್ಲಾ ಮತ್ತೊಂದು ಅಫ್ಗಾನಿಸ್ತಾನ ಆಗಲಿದೆ ಎಂಬ ಸಂಕಥನವನ್ನು ಭಾರತ ನಿಲ್ಲಿಸಬೇಕು ಎಂದಿದ್ದಾರೆ.

‘ಬಾಂಗ್ಲಾದಲ್ಲಿರುವ ಇಸ್ಲಾಂ ಸಮುದಾಯದವರು ದೇಶವನ್ನು ಮತ್ತೊಂದು ಅಫ್ಗಾನಿಸ್ತಾನ ಮಾಡಲು ಹೊರಟಿದ್ದಾರೆ ಎಂಬ ಸಂಕಥನವನ್ನು ಭಾರತ ರೂಪಿಸಿದೆ. ಹಸೀನಾ ಕೈಯಲ್ಲಿ ಮಾತ್ರ ಬಾಂಗ್ಲಾ ಸುರಕ್ಷಿತ ಎಂದು ಅಪಪ್ರಚಾರ ಮಾಡಲಾಗಿದೆ. ಭಾರತ ಈ ಸಂಕಥನದಿಂದ ಹೊರಬರಬೇಕು’ಎಂದು ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿಯವರಿಗೂ ಇದು ಉತ್ಪ್ರೇಕ್ಷಿತ ಎಂದು ತಿಳಿಸಿದ್ದೇನೆ. ಈ ವಿಷಯಕ್ಕೆ ಹಲವು ಕೋನಗಳಿವೆ. ಹಸೀನಾ ಸರ್ಕಾರದ ದೌರ್ಜನ್ಯದ ವಿರುದ್ಧ ದಂಗೆ ಎದ್ದಿದ್ದ ಜನರು ಅವರ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರ ಮೇಲೂ ದಾಳಿ ನಡೆಸಿದ್ದಾರೆ’ ಎಂದು ನೊಬೆಲ್ ಪುರಸ್ಕೃತ ಯೂನಸ್ ಹೇಳಿದ್ದಾರೆ.

ಶೇಖ್ ಹಸೀನಾ ದೇಶ ಬಿಟ್ಟು ತೆರಳುತ್ತಿದ್ದಂತೆ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾ ರೂಪ ಪಡೆದುಕೊಂಡಿತ್ತು. ಅಲ್ಪಸಂಖ್ಯಾತ ಹಿಂದೂಗಳ ಆಸ್ತಿ ಮತ್ತು ಉದ್ಯಮ ಕೇಂದ್ರಗಳ ಮೇಲೆ ದಾಳಿ ನಡೆಯಿತು. ಹಿಂದೂಗಳ ದೇಗುಲಗಳನ್ನು ಧ್ವಂಸ ಮಾಡಲಾಗಿತ್ತು.

‘ಬಾಂಗ್ಲಾದಲ್ಲಿ ಅವಾಮಿ ಲೀಗ್ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಅಲ್ಲದೆ, ಬಾಂಗ್ಲಾದೇಶದ ಹಿಂದೂಗಳು ಎಂದರೆ ಅವಾಮಿ ಲೀಗ್ ಬೆಂಬಲಿಗರು ಎಂಬ ಗ್ರಹಿಕೆ ಇರುವುದರಿಂದ ಅವರು ಹಿಂದೂಗಳನ್ನು ಥಳಿಸಿದ್ದಾರೆ. ದಾಳಿಗಳು ಸರಿ ಎಂದು ನಾನು ಹೇಳುತ್ತಿಲ್ಲ. ಆದರೆ, ಕೆಲವರು ಇದನ್ನೇ ನೆಪವಾಗಿಟ್ಟುಕೊಂಡು ಆಸ್ತಿ ಕಬಳಿಕೆಗೂ ದಾಳಿ ಮಾಡುತ್ತಿದ್ದಾರೆ’ಎಂದೂ ಯೂನಸ್ ಹೇಳಿದ್ದಾರೆ.

ಸರ್ಕಾರದ ಮುಖ್ಯ ಸಲಹೆಗಾರರಾಗಿ ಕಳೆದ ತಿಂಗಳು ಅಧಿಕಾರ ಸ್ವೀಕರಿಸಿದ ಯೂನಸ್, ಭಾರತದ ಜೊತೆಗಿನ ತಮ್ಮ ಮೊದಲ ಮಾತುಕತೆಯಲ್ಲಿ ಬಾಂಗ್ಲಾದಲ್ಲಿರುವ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು.

ಪ್ರಜಾಸತ್ತಾತ್ಮಕ, ಸ್ಥಿರ, ಶಾಂತಿಯುತ ಮತ್ತು ಪ್ರಗತಿಪರ ಬಾಂಗ್ಲಾದೇಶ ನಿರ್ಮಾಣಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದ ಮೋದಿ, ಹಿಂಸಾಚಾರ ಪೀಡಿತ ದೇಶದಲ್ಲಿ ಹಿಂದೂಗಳು ಸೇರಿ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಖಚಿತಪಡಿಸುವಂತೆ ಒತ್ತಾಯಿಸಿದ್ದರು.

1971ರ ಯುದ್ಧದ ಸಂದರ್ಭ ಬಾಂಗ್ಲಾದೇಶದಲ್ಲಿ ಶೇ.22ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ 8ಕ್ಕೆ ಕುಸಿದಿದೆ. ಮೊದಲಿನಿಂದಲೂ ಜಾತ್ಯಾತೀತ ತತ್ವಗಳನ್ನು ಪಾಲಿಸುವ ಅವಾಮಿ ಲೀಗ್‌ಗೆ ಹಿಂದೂಗಳು ಬೆಂಬಲ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.