ಬ್ಯಾಂಕಾಕ್: ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಮತ್ತು ಆಸ್ಟ್ರೇಲಿಯಾದ ಅರ್ಥಶಾಸ್ತ್ರಜ್ಞ ಸೀನ್ ಟರ್ನೆಲ್ ಅವರಿಗೆ ದೇಶದ ಅಧಿಕೃತ ರಹಸ್ಯಗಳ ಕಾಯ್ದೆ ಉಲ್ಲಂಘಿಸಿದ ಅಪರಾಧದ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನುಸೇನಾಡಳಿತದ ಮ್ಯಾನ್ಮಾರ್‌ನ ನ್ಯಾಯಾಲಯವು ವಿಧಿಸಿದೆ.
ರಹಸ್ಯ ಕಾನೂನಿನಡಿ ಸೂಕಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಮೂವರು ತಪ್ಪಿತಸ್ಥರೆನ್ನುವುದು ಸಾಬೀತಾಗಿದ್ದು, ಅವರಿಗೂ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸದ,ಕಾನೂನು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸಿಡ್ನಿಯ ಮ್ಯಾಕ್ವಾರಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಟರ್ನೆಲ್ (58) ಅವರು ಸೂಕಿ ಅವರ ಸಲಹೆಗಾರರಾಗಿದ್ದರು. 2021ರ ಫೆಬ್ರುವರಿ 1ರಂದು ಚುನಾಯಿತ ಸರ್ಕಾರವನ್ನು ಸೇನೆ ಕಿತ್ತೆಸೆದಾಗ, ರಾಜಧಾನಿ ನೇಪೀಡೊವ್‌ನಲ್ಲಿ ಅವರನ್ನು ಸೇನಾಡಳಿತ ಬಂಧಿಸಿ, ವಲಸೆ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಿ ಜೈಲಿನಲ್ಲಿರಿಸಿದೆ. ಸೂಕಿ ಅವರನ್ನೂ ಈಗಾಗಲೇ ವಿವಿಧ ಪ್ರಕರಣಗಳಡಿ ಬಂಧಿಸಿ, ಜೈಲಿನಲ್ಲಿರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.