ಬ್ಯಾಂಕಾಕ್ (ಎಪಿ): ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಅವರ ಶಿಕ್ಷೆ ಅವಧಿಯನ್ನು ಸೇನೆ ನಿಯಂತ್ರಣದಲ್ಲಿರುವ ಸರ್ಕಾರ ಕಡಿತಗೊಳಿಸಿದೆ. ಧಾರ್ಮಿಕ ರಜೆ ಅವಧಿಯ ಹಿನ್ನೆಲೆಯಲ್ಲಿ ಸೇನೆಯ ಆಡಳಿತವು ತನ್ನ ನಿಲುವನ್ನು ಸಡಿಲಗೊಳಿಸಿದೆ.
ಸೂಕಿ ಅವರಿಗೆ 33 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಕಡಿತದ ಬಳಿಕ ಅವರು ಇನ್ನೂ 27 ವರ್ಷ ಸೆರೆಮನೆ ವಾಸವನ್ನು ಅನುಭವಿಸಬೇಕಾಗಿದೆ.
ಮಾಜಿ ಅಧ್ಯಕ್ಷ ಮಿಯಿಂಟ್ ಅವರೂ ಸೇರಿದಂತೆ ಒಟ್ಟು 7,749 ಕೈದಿಗಳ ಶಿಕ್ಷೆಯ ಅವಧಿಯನ್ನು ಸರ್ಕಾರವು ಕ್ಷಮಾದಾನದ ಭಾಗವಾಗಿ ಕಡಿತಗೊಳಿಸಿದೆ ಎಂದು ವರದಿ ತಿಳಿಸಿದೆ.
ಮ್ಯಾನ್ಮಾರ್ ಸೇನಾ ಕೌನ್ಸಿಲ್‌ನ ಮುಖ್ಯಸ್ಥರಾಗಿರುವ ಸೀನಿಯರ್ ಜನರಲ್ ಮಿನ್ ಆಂಗ್ ಲೈಂಗ್ ಅವರು, ಸೂಕಿ ಅವರ ಜೈಲು ವಾಸದ ಅವಧಿಯನ್ನು ಐದು ವರ್ಷ ಕಡಿತಗೊಳಿಸಿ ಕ್ಷಮಾದಾನದ ಆದೇಶ ಹೊರಡಿಸಿದರು ಎಂದು ಸ್ಥಳೀಯ ಮಾಧ್ಯಮ ತಿಳಿಸಿದೆ.
ಮ್ಯಾನ್ಮಾರ್ ಸೇನಾ ಆಡಳಿತದ ಸರ್ಕಾರವು ಭಾನುವಾರವಷ್ಟೇ ರಾಷ್ಟ್ರದಲ್ಲಿ ಜಾರಿಗೊಳಿಸಿರುವ ತುರ್ತು ಪರಿಸ್ಥಿತಿಯ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿತ್ತು. ಅದರ ಹಿಂದೆಯೇ ರಾಜಕೀಯ ಕೈದಿಗಳ ಬಂಧನ ಅವಧಿಯನ್ನು ತಗ್ಗಿಸುವ ಆದೇಶ ಹೊರಬಿದ್ದಿದೆ.
ಸುಮಾರು 125 ಮಂದಿ ವಿದೇಶಿ ಕೈದಿಗಳು, ಜನಾಂಗೀಯ ಶಸ್ತ್ರಸಜ್ಜಿತ ಗುಂಪಿನ 22 ಸದಸ್ಯರಿಗೆ ಕ್ಷಮಾದಾನ ನೀಡಲಾಗಿದೆ. ಜನಾಂಗೀಯ ಶಸ್ತ್ರಸಜ್ಜಿತ ಗುಂಪಿನ 72 ಸದಸ್ಯರಿಗೆ ಸಂಬಂಧಿಸಿದ ಪ್ರಕರಣಗಳನ್ನು ಸೇನಾ ಮಂಡಳಿಯ ಮುಖ್ಯಸ್ಥರು ಕೈಬಿಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.