ADVERTISEMENT

ವಿರೋಧ ಪಕ್ಷಗಳಿಗೆ ಹೊಸ ಶಕ್ತಿ: ವಿದೇಶಿ ಮಾಧ್ಯಮಗಳ ಅಭಿಮತ

ಮೋದಿ ಸುತ್ತ ಸೃಷ್ಟಿಸಿದ್ದ ಪ್ರಭಾವಳಿ ಕಳಚಿದ ಭಾರತದ ಮತದಾರರು

ಪಿಟಿಐ
Published 5 ಜೂನ್ 2024, 14:20 IST
Last Updated 5 ಜೂನ್ 2024, 14:20 IST
   

ವಾಷಿಂಗ್ಟನ್‌/ ಲಂಡನ್‌: ’ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎನ್ನುವ ಪ್ರಭಾವಳಿಯನ್ನು ಭಾರತದ ಮತದಾರರು ಕಳಚಿ  ಹಾಕಿದ್ದಾರೆ ಮತ್ತು ವಿರೋಧ ಪಕ್ಷಗಳಿಗೆ ಹೊಸ ಶಕ್ತಿ ತುಂಬಿದ್ದಾರೆ’ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ಸಾರ್ವತ್ರಿಕ ಚುನಾವಣೆಯನ್ನು ವಿಶ್ಲೇಷಿಸಿವೆ 

‘ಈ ಫಲಿತಾಂಶವು ಅನಿರೀಕ್ಷಿತ ಹೊಡೆತ. ದಶಕಗಳ ಕಾಲದ ಪರಿವರ್ತನೆ ಇದ್ದಕ್ಕಿದ್ದಂತೆಯೇ ಅನಿರೀಕ್ಷಿತ ತಿರುವು ಪಡೆದಿದೆ. ಮೋದಿ ಅವರ ಸುತ್ತ ಸೃಷ್ಟಿಸಿದ್ದ ಪ್ರಭಾವಳಿಯನ್ನು ಮತದಾರರು ಕಳಚಿ ಹಾಕಿದ್ದಾರೆ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

‘ಕಳೆದ ಒಂದು ದಶಕದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹೆಚ್ಚು ಗುರುತಿಸಿಕೊಂಡಿತ್ತು.  ಆದರೆ, ಮಂಗಳವಾರದ ಚುನಾವಣಾ ಫಲಿತಾಂಶವನ್ನು ವಿಶ್ಲೇಷಿಸಿದರೆ  ಮತದಾರರು ಅಸಮಾಧಾನಗೊಂಡಿರುವುದು ಸ್ಪಷ್ಟವಾಗುತ್ತದೆ’ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ADVERTISEMENT

ಈ ಬಾರಿಯ ಚುನಾವಣಾ ಫಲಿತಾಂಶವು ಅಚ್ಚರಿ ರೀತಿಯಲ್ಲಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟಕ್ಕೆ ಹೊಸ ಶಕ್ತಿ ತುಂಬಿದೆ. ‘ಬ್ರ್ಯಾಂಡ್‌ ಮೋದಿ’ ಎನ್ನುವುದು ಹೊಳಪು ಕಳೆದುಕೊಂಡಿದೆ. ಮೋದಿ ಅವರು ಸಹ ಸದಾ ಅಜೇಯರಾಗಿ ಇರಲು ಸಾಧ್ಯವಿಲ್ಲ. ಇದರಿಂದಾಗಿ ವಿರೋಧ ಪಕ್ಷಗಳಲ್ಲಿ ಹೊಸ ಆಶಾಕಿರಣ ಮೂಡಿದೆ ಎಂದು ಬಿಬಿಸಿ ಹೇಳಿದೆ.

ಶುಭಾಶಯ: ಸಾರ್ವತ್ರಿಕ ‌ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಜಯಗಳಿಸಿದ್ದಕ್ಕೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಹಲವು ದೇಶಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.