ಮೇಲ್ಬರ್ನ್ (ಎಪಿ): ಅಂತರರಾಷ್ಟ್ರೀಯ ಜಲ ಪ್ರದೇಶದಲ್ಲಿ ಚೀನಾದ ಯುದ್ಧ ವಿಮಾನ ಸೂಸಿದ ಬೆಂಕಿಯ ಜ್ವಾಲೆಯಿಂದಾಗಿ ಆಸ್ಟ್ರೇಲಿಯಾ ನೌಕಾಪಡೆಯ ಹೆಲಿಕಾಪ್ಟರ್ ಅಪಾಯಕ್ಕೆ ಸಿಲುಕಿದ ಘಟನೆ ಕುರಿತು ಆಸ್ಟ್ರೇಲಿಯಾ ಸರ್ಕಾರವು ರಾಜತಾಂತ್ರಿಕ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ತನ್ನ ಪ್ರತಿಭಟನೆಯನ್ನು ದಾಖಲಿಸಿದೆ.
ಆಸ್ಟ್ರೇಲಿಯಾದ ಯುದ್ಧನೌಕೆ ‘ಎಚ್ಎಂಎಎಸ್ ಹೊಬಾರ್ಟ್’ ನಿಯೋಜಿಸಲಾದ ಉತ್ತರ ಕೊರಿಯಾದ ಅಂತರರಾಷ್ಟ್ರೀಯ ಜಲ ಪ್ರದೇಶವಾದ ‘ಯೆಲ್ಲೊ ಸಮುದ್ರ’ ಭಾಗದಲ್ಲಿ ಶನಿವಾರ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯ ಅಥವಾ ಯಾವುದೇ ಹಾನಿಯಾದ ಕುರಿತು ವರದಿಯಾಗಿಲ್ಲ.
ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಸೋಮವಾರ ಮಾತನಾಡಿ, ‘ಯುದ್ಧನೌಕೆ ಹೊಬಾರ್ಟ್‌ನಿಂದ ನಿಯೋಜಿಸಲಾದ ಆಸ್ಟ್ರೇಲಿಯಾ ನೌಕಾಪಡೆಯ ಸೀಹಾಕ್ ಹೆಲಿಕಾಪ್ಟರ್ ಹಾದುಹೋಗುವ ಮಾರ್ಗದಲ್ಲಿ ಚೀನಾದ ‘ಚೆಂಗ್ಡು ಜೆ–10’ ಯುದ್ಧ ವಿಮಾನವು ಬೆಂಕಿಯನ್ನು ಉಗುಳಿದೆ. ಈ ಬೆಂಕಿಯು ಹೆಲಿಕಾಪ್ಟರ್ ಮುಂಭಾಗದಿಂದ 300 ಮೀಟರ್ (986 ಅಡಿ) ದೂರದಲ್ಲಿತ್ತು. 60 ಮೀಟರ್ (197 ಅಡಿ) ಮೇಲಿತ್ತು. ಆಗ ಎಚ್ಚೆತ್ತುಕೊಂಡ ಪೈಲಟ್, ಈ ಬೆಂಕಿಯ ಜ್ವಾಲೆಗಳು ಹೆಲಿಕಾಪ್ಟರ್‌ಗೆ ತಗುಲದಂತೆ ಪಾರು ಮಾಡಿದರು’ ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಆ್ಯಂಟೊನಿ ಆಲ್ಬನೀಸ್, ‘ಈ ಕೃತ್ಯವು ವೃತ್ತಿಯೋಗ್ಯವಲ್ಲದ್ದು ಮತ್ತು ಒಪ್ಪಿಕೊಳ್ಳಲಾಗದ್ದು ಎಂಬುದನ್ನು ಚೀನಾಕ್ಕೆ ಸ್ಪಷ್ಟಪಡಿಸಿದ್ದೇವೆ. ಈ ಘಟನೆ ಕುರಿತು ಆಸ್ಟ್ರೇಲಿಯಾದ ಜನತೆ ಚೀನಾದಿಂದ ಉತ್ತರ ಬಯಸುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.