ADVERTISEMENT

ಹವಾಮಾನದ ವಿಚಿತ್ರ ಪರಿಸ್ಥಿತಿ ಎದುರಿಸುತ್ತಿದೆ ಆಸ್ಟ್ರೇಲಿಯಾ! ಏನದು?

ಐಎಎನ್ಎಸ್
Published 10 ಡಿಸೆಂಬರ್ 2021, 6:33 IST
Last Updated 10 ಡಿಸೆಂಬರ್ 2021, 6:33 IST
ಕಾಳ್ಗಿಚ್ಚು ನಂದಿಸಲು ಹರಸಾಹಸ ಅಗ್ನಿಶಾಮಕ ಸಿಬ್ಬಂದಿ – ಎಎಫ್‌ಪಿ ಚಿತ್ರ
ಕಾಳ್ಗಿಚ್ಚು ನಂದಿಸಲು ಹರಸಾಹಸ ಅಗ್ನಿಶಾಮಕ ಸಿಬ್ಬಂದಿ – ಎಎಫ್‌ಪಿ ಚಿತ್ರ    

ಸಿಡ್ನಿ: ಆಸ್ಟ್ರೇಲಿಯಾವು ಹವಾಮಾನಕ್ಕೆ ಸಂಬಂಧಿಸಿದ ವಿಚಿತ್ರಪರಿಸ್ಥಿತಿ ಎದುರಿಸುತ್ತಿದೆ. ದೇಶದ ಪಶ್ಚಿಮ ಕರಾವಳಿಯಲ್ಲಿ ಕಾಳ್ಗಿಚ್ಚು ಬಿದ್ದಿದ್ದರೆ, ದೇಶದ ಪೂರ್ವ ಕರಾವಳಿಯಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

ವಾರದಿಂದಲೂ ವಿಪರೀತ ತಾಪಮಾನವಿರುವುದರಿಂದ ಪಶ್ಚಿಮ ಪ್ರವಾಸಿ ತಾಣದ ಮಾರ್ಗರೇಟ್ ನದಿಯ ಸುತ್ತಲ ಪ್ರದೇಶದಲ್ಲಿ ಕಾಳ್ಗಿಚ್ಚು ಆವರಿಸಿದೆ. ಕಾಳ್ಗಿಚ್ಚಿನಿಂದಾಗಿ ಯಾವುದೇ ಮನೆಗಳಿಗೆ ಹಾನಿಯಾಗಿಲ್ಲ. ಸಾವು ಸಂಭವಿಸಿಲ್ಲ. ಆದರೆ ವಿಶಾಲವಾದ ಪ್ರದೇಶವನ್ನು ಜ್ವಾಲೆ ಆವರಿಸಿಕೊಂಡಿದೆ. ಆಗಸದೆತ್ತರಕ್ಕೆ ಹೊಗೆ ಎದ್ದಿದೆ. ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ಆಸ್ಟ್ರೇಲಿಯಾದ ಹಿಂದೂ ಮಹಾಸಾಗರದ ಕರಾವಳಿಯು 40 ಡಿಗ್ರಿ ಸೆಲ್ಸಿಯಸ್ (104 ಫ್ಯಾರನ್‌ಹೀಟ್) ತಲುಪಿರುವಾಗಲೇ. ಖಂಡದ ಇನ್ನೊಂದು ಭಾಗವಾದ ಪೆಸಿಫಿಕ್ ಕರಾವಳಿಯಲ್ಲಿ ತಿಂಗಳುಗಳಿಂದ ಮಳೆ ಎಡಬಿಡದೇ ಸುರಿಯುತ್ತಿದೆ. ಹೀಗಾಗಿ ಅಲ್ಲಿ ಪ್ರವಾಹ ಉಂಟಾಗಿದೆ.

‘ನ್ಯೂ ಸೌತ್ ವೇಲ್ಸ್ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಹೀಗಾಗಿ ಭಾರೀ ಮಳೆ ಮತ್ತು ದೊಡ್ಡ ಪ್ರವಾಹ ಉಂಟಾಗುತ್ತಿದೆ,’ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ.

ADVERTISEMENT

‘ಸಿಡ್ನಿಯ ದಕ್ಷಿಣದಲ್ಲಿರುವ ಕೆಲವು ಗ್ರಾಮಗಳು ಕಳೆದ 24 ಗಂಟೆಗಳಲ್ಲಿ 21 ಸೆಂಟಿಮೀಟರ್‌ ಮಳೆ ಕಂಡಿದೆ. ಆದರೆ, ಸರಿಯಾಗಿ ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ದೇಶದ ಅತ್ಯಂತ ಭೀಕರವಾದ ಕಾಳ್ಗಿಚ್ಚು ಆವರಿಸಿತ್ತು. ಆದರೆ, ಈ ವರ್ಷ ಕಳೆದ 122 ವರ್ಷಗಳಲ್ಲೇ ಅತ್ಯಧಿಕ ಮಳೆ ಬಿದ್ದಿದೆ.

ಮಾನವ ನಿರ್ಮಿತ ಕಾರಣದ ಹವಾಮಾನ ಬದಲಾವಣೆಯಿಂದ ಆಸ್ಟ್ರೇಲಿಯಾದಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ಖಂಡವು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಕಂಡಿದೆ. ಕಾಳ್ಗಿಚ್ಚು ಮತ್ತು ಪ್ರವಾಹಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.