ADVERTISEMENT

ಆಸ್ಟ್ರೇಲಿಯಾ ಪ್ರಧಾನಿ ಭಾರತ ಭೇಟಿ ಮುಂದೂಡಿಕೆ

ರಕ್ಷಣಾ ಕಾರ್ಯಕ್ಕೆ 3 ಸಾವಿರ ಸೇನಾ ಸಿಬ್ಬಂದಿ ನಿಯೋಜನೆ

ಪಿಟಿಐ
Published 4 ಜನವರಿ 2020, 17:38 IST
Last Updated 4 ಜನವರಿ 2020, 17:38 IST
ಕಾಳ್ಗಿಚ್ಚಿನಿಂದಾಗಿ ಪೂರ್ವ ಗಿಪ್ಸ್‌ಲೆಂಟ್‌, ವಿಕ್ಟೋರಿಯಾ ಪ್ರದೇಶದಲ್ಲಿ ದಟ್ಟ ಹೊಗೆ ಆವೃತ್ತವಾಗಿರುವುದು –ರಾಯಿಟರ್ಸ್‌ ಚಿತ್ರ
ಕಾಳ್ಗಿಚ್ಚಿನಿಂದಾಗಿ ಪೂರ್ವ ಗಿಪ್ಸ್‌ಲೆಂಟ್‌, ವಿಕ್ಟೋರಿಯಾ ಪ್ರದೇಶದಲ್ಲಿ ದಟ್ಟ ಹೊಗೆ ಆವೃತ್ತವಾಗಿರುವುದು –ರಾಯಿಟರ್ಸ್‌ ಚಿತ್ರ   

ಮೆಲ್ಬರ್ನ್‌ : ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿನಿಂದ ಉಂಟಾಗಿರುವ ವಿಷಮ ಪರಿಸ್ಥಿತಿಯಿಂದಾಗಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರುಭಾರತ ಭೇಟಿಯನ್ನು ಮುಂದೂಡಿದ್ದು, ಮುಂದಿನ ದಿನಗಳಲ್ಲಿ ಭೇಟಿಯ ದಿನಾಂಕವನ್ನು ಮರುನಿಗದಿ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ನಿಮಿತ್ತ ಜನವರಿ 13ರಿಂದ ನಾಲ್ಕು ದಿನಗಳ ಕಾಲ ಸ್ಕಾಟ್‌ ಅವರು ಭಾರತಕ್ಕೆ ಭೇಟಿ ನೀಡಬೇಕಿತ್ತು.

‘ನಮ್ಮ ದೇಶವು ವಿನಾಶಕಾರಿ ಕಾಳ್ಗಿಚ್ಚಿನಿಂದ ತತ್ತರಿಸಿದೆ. ಇಂಥ ಕಷ್ಟದ ಸಮಯದಲ್ಲಿ ಜನರ ಜೊತೆ ಇರುವುದರ ಕಡೆಗೆ ನಮ್ಮ ಸರ್ಕಾರ ಸಂಪೂರ್ಣ ಗಮನಹರಿಸಿದೆ’ ಎಂದು ಪ್ರಧಾನಿ ಮಾರಿಸನ್‌ ಹೇಳಿಕೆ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಜಪಾನ್‌ ಭೇಟಿಯನ್ನೂ ಮಾರಿಸನ್‌ ಅವರು ಮುಂದೂಡಿದ್ದಾರೆ.

ADVERTISEMENT

ಪ್ರಧಾನಿ ಮೋದಿ ಅವರು ಮಾರಿಸನ್‌ ಅವರೊಂದಿಗೆ ಶುಕ್ರವಾರ ದೂರವಾಣಿ ಮೂಲಕ ಮಾತನಾಡಿ, ಅಗತ್ಯ ನೆರವು ನೀಡುವುದಕ್ಕೆ ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.

ಸೇನಾ ಸಿಬ್ಬಂದಿ ನಿಯೋಜನೆ: ತೀವ್ರತರದಲ್ಲಿ ಹರಡುತ್ತಿರುವ ಕಾಳ್ಗಿಚ್ಚನ್ನು ತಡೆಯುವ ಹಾಗೂ ಜನರನ್ನು ರಕ್ಷಿಸುವ ಉದ್ದೇಶದಿಂದ ಪ್ರಧಾನಿ ಮಾರಿಸನ್‌ ಅವರು ಸೇನೆಯ 3 ಸಾವಿರ ಸಿಬ್ಬಂದಿಯನ್ನು ಶನಿವಾರ ನಿಯೋಜಿಸಿದ್ದಾರೆ. ಕಾಳ್ಗಿಚ್ಚಿನಿಂದ ಈ ವರೆಗೂ 23 ಮಂದಿ ಸಾವನ್ನಪ್ಪಿದ್ದಾರೆ.

ಗರಿಷ್ಟ ತಾಪಮಾನ ಮತ್ತು ತೀವ್ರ ಗಾಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ. ‘ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುತ್ತಿರುವುದು ಇದೇ ಮೊದಲು’ ಎಂದು ರಕ್ಷಣಾ ಸಚಿವೆ ಲಿಂಡಾ ರೈನೊಡ್ಸ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.