ಕ್ಯಾನ್‌ಬೆರಾ: ಆಸ್ಟ್ರೇಲಿಯಾದಲ್ಲಿ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೆಗೆ ಫೇಸ್‌ಬುಕ್ ಹೇರಿರುವ ನಿರ್ಬಂಧವನ್ನು ಹಿಂಪಡೆಯಬೇಕು ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಆಗ್ರಹಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸುವ ಕುರಿತ ನಮ್ಮ ಸರ್ಕಾರದ ನಿಯಮಗಳನ್ನೇ ವಿಶ್ವದ ಇತರ ಸರ್ಕಾರಗಳೂ ಜಾರಿಗೆ ತರಬಹುದು ಎಂಬ ಎಚ್ಚರಿಕೆಯನ್ನೂ ಅವರು ಇದೇ ವೇಳೆ ನೀಡಿದ್ದಾರೆ. ಈ ಕುರಿತು ಡಿಜಿಟಲ್ ದೈತ್ಯ ಸಂಸ್ಥೆಗಳು ಮಾತುಕತೆಗೆ ಮರಳುವಂತೆ ಅವರು ಕರೆ ನೀಡಿದ್ದಾರೆ.
‘ಆಸ್ಟ್ರೇಲಿಯನ್ನರಿಗೆ ಸುದ್ದಿಗಳ ವೀಕ್ಷಣೆ ಮತ್ತು ಹಂಚಿಕೊಳ್ಳುವುದನ್ನು ನಿರ್ಬಂಧಿಸಿರುವ ಫೇಸ್‌ಬುಕ್ ಕ್ರಮ ಸರಿಯಲ್ಲ. ಈ ಮೂಲಕ ಅವರು ನಮ್ಮನ್ನು ಬೆದರಿಸುತ್ತಿದ್ದಾರೆ. ಇದಕ್ಕೆ ಆಸ್ಟ್ರೇಲಿಯನ್ನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದೂ ನನಗೆ ಗೊತ್ತಿದೆ. ನನ್ನ ಪ್ರಕಾರ ಫೇಸ್‌ಬುಕ್‌ನ ಈ ಕ್ರಮ ಒಳ್ಳೆಯ ನಡೆಯಲ್ಲ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಅವರು ಆದಷ್ಟು ಬೇಗ ಮಾತುಕತೆಗೆ ಬಂದರೆ, ಸಮಸ್ಯೆಯನ್ನು ಬಗೆಹರಿಸಬಹುದು’ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಜತೆ ಮಾತುಕತೆ: ‘ಫೇಸ್‌ಬುಕ್ ವಿವಾದದ ಬಗ್ಗೆ ಗುರುವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೂ ಚರ್ಚೆ ನಡೆಸಿದ್ದೇನೆ’ ಎಂದು ಮಾರಿಸನ್ ಇದೇ ವೇಳೆ ತಿಳಿಸಿದರು. ಅಲ್ಲದೆ, ಆಸ್ಟ್ರೇಲಿಯಾದ ಪ್ರಸ್ತಾವಿತ ಕಾನೂನಿನ ಬಗ್ಗೆ ಬ್ರಿಟನ್, ಕೆನಡಾ ಮತ್ತು ಫ್ರಾನ್ಸ್ ನಾಯಕರೊಂದಿಗೂ ಚರ್ಚಿಸುತ್ತಿರುವುದಾಗಿ ಅವರು ಹೇಳಿದರು.
‘ಈ ವಿಷಯದಲ್ಲಿ ಆಸ್ಟ್ರೇಲಿಯಾ ಏನು ಮಾಡುತ್ತಿದೆ ಎಂಬುದರ ಬಗ್ಗೆ ಇಡೀ ವಿಶ್ವವೇ ಆಸಕ್ತಿಯಿಂದ ನೋಡುತ್ತಿದೆ. ಅದಕ್ಕಾಗಿಯೇ ಗೂಗಲ್, ಫೇಸ್‌ಬುಕ್‌ನೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಆಹ್ವಾನಿಸುತ್ತೇನೆ. ಏಕೆಂದರೆ ಆಸ್ಟ್ರೇಲಿಯಾ, ಇಲ್ಲಿ ಮಾಡಿದ್ದನ್ನು ಪಾಶ್ಚಿಮಾತ್ಯ ದೇಶಗಳೂ ತಮ್ಮ ವ್ಯಾಪ್ತಿಯಲ್ಲಿ ಅನುಸರಿಸುವ ಸಾಧ್ಯತೆ ಇದೆ. ಈ ಬಗ್ಗೆ ಅವರಿಗೂ ತಿಳಿದಿದೆ’ ಎಂದು ಮಾರಿಸನ್ ಪ್ರತಿಕ್ರಿಯಿಸಿದರು.
‘ನಮ್ಮ ಸರ್ಕಾರವು, ಅವರ ತಾಂತ್ರಿಕ ವಿಷಯಗಳ ಕುರಿತ ಸಮಸ್ಯೆಗಳನ್ನು ಕೇಳಲು ಸಿದ್ಧವಿದೆ. ಅತ್ಯಂತ ಸ್ನೇಹಪರ ದೇಶವಾದ ಆಸ್ಟ್ರೇಲಿಯಾದೊಂದಿಗೆ ಗೆಳೆತನ ಬಿಡುವುದು ಸರಿಯಲ್ಲ. ನಾವು ಅವರೊಂದಿಗೆ ಉತ್ತಮ ಸ್ನೇಹಿತನಾಗಿರಲೇ ಬಯಸುತ್ತೇವೆ. ಈ ಕುರಿತು ಈಗ ಅವರು ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಮಾರಿಸನ್ ಹೇಳಿದ್ದಾರೆ.
ಪ್ರಸ್ತಾವಿತ ಮಸೂದೆಯು ಜನಪ್ರತಿನಿಧಿಗಳ ಸಭೆಯಲ್ಲಿ ಅಂಗೀಕೃತಗೊಂಡಿದೆ. ಸೆನೆಟ್ ಅನುಮೋದನೆ ಬಳಿಕ ಅದು ಕಾನೂನಾಗಿ ಜಾರಿಗೆ ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.