ಸಿಡ್ನಿ: ಉಗ್ರವಾದದ ನಂಟು ಜೊತೆಗೆ ಅಮಾಯಕರ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಆರೋಪದ ಮೇಲೆ 7 ಬಾಲಕರನ್ನು ಆಸ್ಟ್ರೇಲಿಯಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರೆಲ್ಲ 15ರಿಂದ 17ವರ್ಷದೊಳಗಿನವರು. ಇದರಲ್ಲಿ ಗುರುತು ಬಹಿರಂಗಪಡಿಸದ 16 ವರ್ಷದ ಬಾಲಕ ಏಪ್ರಿಲ್ 15ರಂದು ಸಿಡ್ನಿ ಚರ್ಚ್‌ನಲ್ಲಿ ನಡೆದಿದ್ದ ದಾಳಿಯ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಆಸ್ಟ್ರೇಲಿಯಾದ ‘ಜಾಯಿಂಟ್ ಕೌಂಟರ್ ಟೆರರಿಸಮ್ ಟೀಮ್’ ಹಾಗೂ ‘ಆಸ್ಟ್ರೇಲಿಯನ್ ಸೆಕ್ಯೂರಿಟಿ ಇಂಟಲಿಜನ್ಸ್’ನ 400ಕ್ಕೂ ಹೆಚ್ಚು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸಿಡ್ನಿಯ 13 ಕಡೆ ದಾಳಿ ನಡೆಸಿದ್ದರು. ದಾಳಿಯ ವೇಳೆ ಈ ಬಾಲಕರು ಬಂಧಿತರಾಗಿದ್ದಾರೆ.
ಬಂಧಿತರು ಧಾರ್ಮಿಕ ಪ್ರೇರಿತ ಉಗ್ರವಾದದ ನಂಟು ಹೊಂದಿದ್ದರು. ಅಲ್ಲದೇ ಸಿಡ್ನಿಯಲ್ಲಿ ಅಮಾಯಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು. ಮುನ್ನೆಚ್ಚರಿಕ ಕ್ರಮವಾಗಿ ಬಂಧಿಸಲಾಗಿದೆ ಎಂದು ನ್ಯೂ ಸೌತ್ ವೇಲ್ಸ್‌ನ ಪೊಲೀಸ್ ಕಮಿಷನರ್ ಡೇವಿಡ್ ಹಡ್ಸನ್ ತಿಳಿಸಿದ್ದಾರೆ
ಏಪ್ರಿಲ್ 15ರಂದು ಸಿಡ್ನಿಯ ಚರ್ಚ್ ಒಂದರಲ್ಲಿ ಕ್ರಿಶ್ಚಿಯನ್ ಬಿಷಪ್ ಸೇರಿದಂತೆ ನಾಲ್ವರಿಗೆ ಚೂರಿಯಿಂದ ಇರಿದಿದ್ದ ಆರೋಪದ ಮೇಲೆ 16 ವರ್ಷ ವಯಸ್ಸಿನ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದರು.
ಇದಕ್ಕೂ ಮುನ್ನ ಏಪ್ರಿಲ್ 13ರಂದು ಸಿಡ್ನಿ ಶಾಪಿಂಗ್ ಮಾಲ್‌ನಲ್ಲಿ ಯುವಕನೊಬ್ಬ ಹಲವರಿಗೆ ಚೂರಿಯಿಂದ ಇರಿದಿದ್ದರಿಂದ ಆರು ಜನ ಮೃತಪಟ್ಟಿದ್ದರು. ಅವನನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದರು.
ಈ ಎರಡೂ ಘಟನೆಗಳ ಬಳಿಕ ಎಚ್ಚೆತ್ತುಕೊಂಡಿರುವ ಆಸ್ಟ್ರೇಲಿಯಾ ಪೊಲೀಸರು ಉಗ್ರವಾದದಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಅದರ ನಂಟು ಹೊಂದಿರುವವರ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.