ADVERTISEMENT

ಅಮೆರಿಕ: ವೇದಿಕೆ ಮೇಲೆ ಲೇಖಕ ಸಲ್ಮಾನ್ ರಶ್ದಿಗೆ 10-15 ಬಾರಿ ಇರಿತ

ಏಜೆನ್ಸೀಸ್
Published 13 ಆಗಸ್ಟ್ 2022, 8:56 IST
Last Updated 13 ಆಗಸ್ಟ್ 2022, 8:56 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ   

ಷಟೌಕ್ವಾ (ಅಮೆರಿಕ): ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ವೊಂದರಲ್ಲಿ ಪಾಲ್ಗೊಂಡಿದ್ದ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

ಷಟೌಕ್ವಾ ಇನ್‌ಸ್ಟಿಟ್ಯೂಟ್‌ ಆಯೋಜಿಸಿದ್ದ ಕಲೆ ಮತ್ತು ಸಾಹಿತ್ಯದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಕರು ರಶ್ದಿ ಅವರನ್ನು ಭಾಷಣಕ್ಕೆ ಆಹ್ವಾನಿಸಿದರು. ರಶ್ದಿ ಅವರು ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ವೇದಿಕೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಅವರಿಗೆ ಚಾಕುವಿನಿಂದ ಇರಿದನು. ತಕ್ಷಣವೇ ರಶ್ದಿ ನೆಲಕ್ಕೆ ಕುಸಿದುಬಿದ್ದರು. ಹಲ್ಲೆಕೋರನನ್ನು ಬಂಧಿಸಲಾಗಿದೆ.

ರಶ್ದಿ ಅವರ ಕುತ್ತಿಗೆಯ ಬಲಭಾಗ ಸೇರಿದಂತೆ ಹಲವೆಡೆ ಇರಿಯಲಾಗಿದೆ.ತಕ್ಷಣವೇ ಅವರನ್ನು ಹೆಲಿಕಾಪ್ಟರ್ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ADVERTISEMENT

ಹಲವು ಬಾರಿ ಇರಿತ: ‘ಸಲ್ಮಾನ್‌ ರಶ್ದಿ ಅವರಿಗೆ ಕುತ್ತಿಗೆ ಬಲಭಾಗವೂ ಸೇರಿದಂತೆ ಹಲವು ಬಾರಿ ಚಾಕುವಿನಿಂದ ಇರಿತದಿಂದಾದ ಗಾಯಗಳಾಗಿದ್ದು, ದಾಳಿ ನಡೆದ ನಂತರ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು’ ಎಂದು ಅವರಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿರುವ ವೈದ್ಯೆ ರೀಟಾ ಲ್ಯಾಂಡ್‌ಮ್ಯಾನ್‌ ಹೇಳಿದ್ದಾರೆ.‍

‍‘ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರೀಟಾ ಅವರು, ಈ ಘಟನೆ ನಡೆದ ಬೆನ್ನಲ್ಲೇ ವೇದಿಕೆಗೆ ಧಾವಿಸಿ, ಚಿಕಿತ್ಸೆಗೆ ನೆರವಾದರು’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ವೇದಿಕೆಯತ್ತ ನುಗ್ಗಿದ ಅಪರಿಚಿತ ವ್ಯಕ್ತಿ, ರಶ್ದಿ ಅವರಿಗೆ 10–15 ಬಾರಿ ಚಾಕುವಿನಿಂದ ಇರಿದ ಎಂದು ಪ್ರತ್ಯಕ್ಷಿದರ್ಶಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ರಶ್ದಿ ಅವರ ಸಂದರ್ಶನ ನಡೆಸುತ್ತಿದ್ದ ವ್ಯಕ್ತಿಯೂ ಈ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಮುಂಬೈನಲ್ಲಿ ಜನಿಸಿರುವ ರಶ್ದಿ ಅವರು 14 ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಕೃತಿಗಳು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರಿಂದಾಗಿ ಅವರು ಬೆದರಿಕೆ ಕರೆಗಳನ್ನು ಎದುರಿಸಿದ್ದಾರೆ. ಹಲವು ದಶಕಗಳ ಕಾಲ ಅವರು ಅಜ್ಞಾತವಾಸದಲ್ಲಿಯೂ ಇದ್ದರು. 1998ರಲ್ಲಿ ಪ್ರಕಟವಾದ ‘ದಿ ಸಟಾನಿಕ್‌ ವರ್ಸ್‌ಸ್‌’ ಕೃತಿ ಅವರಿಗೆ ಭಾರಿ ಜನಪ್ರಿಯತೆ ತಂದುಕೊಡುವ ಜೊತೆಗೆ, ಜೀವ ಬೆದರಿಕೆಗೂಕಾರಣವಾಗಿತ್ತು.

ಇರಾನ್‌ನ ಧಾರ್ಮಿಕ ಮುಖಂಡ ಆಯತೊಲ್ಲಾ ಖೊಮೇನಿ, ರಶ್ದಿ ಹತ್ಯೆ ಫತ್ವಾ ಹೊರಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.