ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗುವ ಕ್ರಿಯೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ವಿಶ್ವಸಂಸ್ಥೆ ಆಗ್ರಹಪಡಿಸಿದೆ.
ಭಾರತ ಮತ್ತು ಚೀನಾ ನಡುವೆ ಗಡಿವಿವಾದ ಶಮನಗೊಳಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಅನ್ನು ಉಲ್ಲೇಖಿಸಿ, ಯಾರು ಮಧ್ಯಸ್ಥಿಕೆ ವಹಿಸಬೇಕು ಎಂದು ನಿರ್ಧರಿಸುವುದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಕೆಲಸವಲ್ಲ ಎಂದು ಅವರ ವಕ್ತಾರ ಸ್ಟೀಫನ್ ದುಜರ್ರೆಕ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ವಿಶ್ವಸಂಸ್ಥೆ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಪ್ರತಿಕೂಲ ಬೆಳವಣಿಗೆಗೆ ಅವಕಾಶ ನೀಡಬಾರದು ಎಂದು ಆಗ್ರಹಪಡಿಸುತ್ತದೆ ಎಂದರು.
ಭಾರತ ಮತ್ತು ಚೀನಾ ನಡುವೆ ಸುಮಾರು 3,500 ಕಿ.ಮೀ ಉದ್ದದ ಗಡಿ ಇದೆ. ಲಡಾಖ್ ಮತ್ತು ಉತ್ತರ ಸಿಕ್ಕಿಂನಲ್ಲಿ ಉಭಯ ದೇಶಗಳ ಸೇನೆಯು ಜಮಾವಣೆಗೊಳ್ಳುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಳ್ಳುವ ಸೂಚನೆಯನ್ನು ನೀಡಿದೆ.
ಚೀನಾದ ಸೇನೆಯು ಗಡಿಭಾಗದಲ್ಲಿ ತನ್ನ ಸೇನೆಯ ಸಾಮಾನ್ಯ ಗಸ್ತು ಕಾರ್ಯಕ್ಕೆ ಅಡ್ಡಿಪಡಿಸುತ್ತಿದೆ ಎಂದು ಭಾರತ ಆರೋಪಿಸಿದ್ದು, ಇದನ್ನು ಬೀಜಿಂಗ್ ನಿರಾಕರಿಸಿದೆ.
ಗಡಿ ಭಾಗದ ಅರಿವು ಭಾರತ ಸೇನೆಗೆ ಪೂರ್ಣವಾಗಿ ಇದೆ. ಪ್ರತಿಕೂಲ ಚಟುವಟಿಕೆಯಲ್ಲಿ ತೊಡಗಿದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.