ADVERTISEMENT

ಝವಾಹಿರಿ ಹತ್ಯೆಗೆ ರಹಸ್ಯ ‘ಫ್ಲೈಯಿಂಗ್ ಗಿನ್ಸು’ ಕ್ಷಿಪಣಿ ಬಳಸಿತೇ ಅಮೆರಿಕ?

ಏಜೆನ್ಸೀಸ್
Published 2 ಆಗಸ್ಟ್ 2022, 5:59 IST
Last Updated 2 ಆಗಸ್ಟ್ 2022, 5:59 IST
ಆಯ್ಮಾನ್ ಅಲ್‌ ಝವಾಹಿರಿ
ಆಯ್ಮಾನ್ ಅಲ್‌ ಝವಾಹಿರಿ   

ವಾಷಿಂಗ್ಟನ್: ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್‌ ಝವಾಹಿರಿಯನ್ನು ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ಆತನ ನಿವಾಸದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ತಿಳಿಸಿದೆ.

ಡ್ರೋನ್‌ ದಾಳಿ ಮೂಲಕ ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ತಿಳಿಸಿದ್ದು, ಹತ್ಯೆ ನಡೆದ ಸ್ಥಳದಲ್ಲಿ ಯಾವುದೇ ಸ್ಫೋಟ ಸಂಭವಿಸಿಲ್ಲ. ನಾಗರಿಕರಿಗೆ ಹಾನಿಯಾಗಿಲ್ಲ ಎಂದೂ ಅಮೆರಿಕ ಹೇಳಿದೆ. ಹಾಗಾದರೆ ಝವಾಹಿರಿ ಹತ್ಯೆಗೆ ಅಮೆರಿಕ ರಹಸ್ಯ ‘ಫ್ಲೈಯಿಂಗ್ ಗಿನ್ಸು’ ಕ್ಷಿಪಣಿಯನ್ನು ಬಳಸಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಝವಾಹಿರಿಯನ್ನು ಹತ್ಯೆ ಮಾಡಲು ಅಮೆರಿಕವು ಭೀಕರ ‘ಹೆಲ್‌ಫೈರ್ ಆರ್9ಎಕ್ಸ್’ ಸಿಡಿತಲೆರಹಿತ ಕ್ಷಿಪಣಿಯನ್ನು ಬಳಸಿದೆ ಎಂದು ಭಾವಿಸಲಾಗಿದೆ.

‘ಹೆಲ್‌ಫೈರ್ ಆರ್9ಎಕ್ಸ್’ ವಿಶೇಷತೆಯೇನು?

‘ಹೆಲ್‌ಫೈರ್ ಆರ್9ಎಕ್ಸ್’ ಸಿಡಿತಲೆರಹಿತ ಕ್ಷಿಪಣಿಯಾಗಿದೆ. ಇದು ರೇಜರ್ ಮಾದರಿಯ ಆರು ಬ್ಲೇಡ್‌ಗಳನ್ನು ಹೊಂದಿದ್ದು, ಡ್ರೋನ್‌ನ ಹೊರಮೈಯಿಂದ ವಿಸ್ತರಿಸಿಕೊಂಡು ದಾಳಿ ಮಾಡುತ್ತದೆ. ಸ್ಫೋಟಗೊಳ್ಳುವುದಿಲ್ಲ.

ಝವಾಹಿರಿ ಹತ್ಯೆಯಲ್ಲಿ ‘ಹೆಲ್‌ಫೈರ್ ಆರ್9ಎಕ್ಸ್’ ಬಳಸಿರುವ ಬಗ್ಗೆ ಅಮೆರಿಕ ಅಥವಾ ಕೇಂದ್ರೀಯ ಗುಪ್ತಚರ ದಳ (ಸಿಐಎ) ಅಧಿಕೃತ ಹೇಳಿಕೆ ನೀಡಿಲ್ಲ.

2017ರಲ್ಲಿ ಉಗ್ರನ ಹತ್ಯೆಗೆ ಬಳಕೆಯಾಗಿದ್ದ ‘ಹೆಲ್‌ಫೈರ್’

2017ರ ಮಾರ್ಚ್‌ನಲ್ಲಿ ಅಲ್‌ಕೈದಾ ನಾಯಕ ಅಬು ಅಲ್–ಖಾಯರ್ ಅಲ್–ಮಸ್ರಿ ಅನ್ನು ‘ಹೆಲ್‌ಫೈರ್ ಆರ್9ಎಕ್ಸ್’ ಮೂಲಕ ಹತ್ಯೆ ಮಾಡಲಾಗಿತ್ತು. ಆತ ಕಾರಿನಲ್ಲಿ ಸಂಚರಿಸುತ್ತಿದ್ದಾಗಲೇ ಆತನ ಮೇಲೆ ದಾಳಿ ನಡೆದಿತ್ತು.

ಆತ ಚಲಿಸುತ್ತಿದ್ದ ಕಾರಿನಲ್ಲಿ ದೊಡ್ಡದಾದ ರಂಧ್ರವಾದ ಚಿತ್ರವನ್ನು ಬಳಿಕ ಬಿಡುಗಡೆ ಮಾಡಲಾಗಿತ್ತು. ಈ ಕ್ಷಿಪಣಿಯು ಕಾರಿನ ಲೋಹದ ಛಾವಣಿಯನ್ನು ಕೊರೆದು ಅಲ್–ಮಸ್ರಿಯನ್ನು ಹತ್ಯೆ ಮಾಡಿತ್ತು. ಕಾರಿನ ಮುಂಭಾಗ ಮತ್ತು ಹಿಂಭಾಗಕ್ಕೆ ಕಿಂಚಿತ್ತೂ ಹಾನಿಯಾಗಿರಲಿಲ್ಲ. ಸಂಪೂರ್ಣ ಯಥಾಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು.

ಈ ಘಟನೆಗೂ ಮುನ್ನ ‘ಹೆಲ್‌ಫೈರ್’ ಕ್ಷಿಪಣಿ ದಾಳಿ ವೇಳೆ ಸ್ಫೋಟ ಹಾಗೂ ಇತರ ಹಾನಿಗಳಿಗೆ ಕಾರಣವಾಗಿದ್ದ ಉದಾಹರಣೆಗೂ ಇದ್ದವು. ಆದರೆ ಸದ್ಯ ಈ ಕ್ಷಿಪಣಿ ನಿರ್ದಿಷ್ಟ ಗುರಿಯನ್ನು ಮಾತ್ರವೇ ತಲುಪಿ ಉದ್ದೇಶ ಈಡೇರಿಸುತ್ತಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.