ಬಾಲ್ಟಿಮೋರ್: ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಗೆ ಸರಕು ಸಾಗಣೆ ಹಡಗೊಂದು ಅಪ್ಪಳಿಸಿ ಪರಿಣಾಮ 6 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ನಸುಕಿನಲ್ಲಿ ಸಂಭವಿಸಿದ್ದ ಹಡಗು ದುರಂತದಿಂದಾಗಿ ಹಲವು ವಾಹನಗಳು ನದಿಗೆ ಉರುಳಿದ್ದವು. ನೀರಿನಲ್ಲಿ ಸಿಲುಕಿದ್ದವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ, ಸತತ ಕಾರ್ಯಾಚರಣೆ ಬಳಿಕ ಪ್ರತಿಕೂಲ ಹವಾಮಾನದಿಂದಾಗಿ ಕಾಣೆಯಾಗಿದ್ದವರು ಮೃತಪಟ್ಟಿರುವ ಸಾಧ್ಯತೆ ಹೆಚ್ಚಿದೆ ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಮತ್ತು ಮೇರಿಲ್ಯಾಂಡ್ ಸ್ಟೇಟ್ ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದವರ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು, ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 18 ಗಂಟೆಗಳ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಟಿಮೋರ್‌ನಿಂದ ಶ್ರೀಲಂಕಾಕ್ಕೆ ಹೊರಟಿದ್ದ, ಸಿಂಗಪುರ ಧ್ವಜ ಹೊತ್ತಿದ್ದ ‘ಡಾಲಿ’ ಎಂಬ ಹೆಸರಿನ ಹಡಗು ‘ಫ್ರಾನ್ಸಿಸ್ ಸ್ಕಾಟ್ ಕೀ’ ಸೇತುವೆಯ ಒಂದು ಆಧಾರಸ್ತಂಭಕ್ಕೆ ಡಿಕ್ಕಿ ಹೊಡೆದಿದ್ದು, ಕ್ಷಣಮಾತ್ರದಲ್ಲಿ ಸೇತುವೆ ಕುಸಿದುಬಿದ್ದಿತ್ತು. ಆ ಬಳಿಕ ಹಡಗಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಲಾಗಿದೆ.
‘ಹಡಗು ಸೇತುವೆಗೆ ಡಿಕ್ಕಿ ಹೊಡೆಯುವ ಕೆಲವು ಕ್ಷಣಗಳ ಮೊದಲು ಅಪಾಯ ಸಾಧ್ಯತೆಯ ತುರ್ತು ಸಂದೇಶವನ್ನು ನಾವಿಕರು ಕಳುಹಿಸಿದ್ದರು. ಹೀಗಾಗಿ ಸೇತುವೆ ಮೇಲಿನ ವಾಹನ ಸಂಚಾರವನ್ನು ಕಡಿಮೆ ಮಾಡಲು ಸಾಧ್ಯವಾಯಿತು. ಹಡಗಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆ ಉದ್ಭವಿಸಿತ್ತು’ ಎಂದು ಬಾಲ್ಟಿಮೋರ್ ಮೇಯರ್ ಬ್ರೆಂಡನ್ ಸ್ಕಾಟ್ ಮಾಹಿತಿ ನೀಡಿದ್ದಾರೆ.
ದುರಂತ ಸಂಭವಿಸಿದ ವೇಳೆ ನದಿಯಲ್ಲಿಯ ಉಷ್ಣಾಂಶವು 8 ಡಿಗ್ರಿ ಸೆಲ್ಸಿಯಸ್ ಇತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.