ADVERTISEMENT

Bangla Unrest | ಶೇಖ್ ಹಸೀನಾ ವಿರುದ್ಧ 2ನೇ ಪ್ರಕರಣ ದಾಖಲು

ಪಿಟಿಐ
Published 14 ಆಗಸ್ಟ್ 2024, 15:46 IST
Last Updated 14 ಆಗಸ್ಟ್ 2024, 15:46 IST
ಶೇಖ್‌ ಹಸೀನಾ–  ಪಿಟಿಐ/ಎಪಿ ಚಿತ್ರ
ಶೇಖ್‌ ಹಸೀನಾ–  ಪಿಟಿಐ/ಎಪಿ ಚಿತ್ರ   

ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ವಿರುದ್ಧ ಕೊಲೆ ಪ್ರಕರಣದ ತನಿಖೆಗೆ ಕೋರ್ಟ್‌ ಆದೇಶಿಸಿದ ಬೆನ್ನಲ್ಲೇ ಹಸೀನಾ ಮೇಲೆ ಬುಧವಾರ ಮತ್ತೊಂದು ಅಪರಾಧ ಪ್ರಕರಣ ದಾಖಲಾಗಿದೆ.

2015ರಲ್ಲಿ ವಕೀಲರೊಬ್ಬರನ್ನು ಅಪಹರಿಸಿದ ಆರೋಪದಲ್ಲಿ ಹಸೀನಾ ಮತ್ತು ಅವರ ಸಂಪುಟದ ಮಾಜಿ ಸಚಿವರು ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಢಾಕಾ ಮೆಟ್ರೊಪಾಲಿಟನ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಫರ್ಜಾನಾ ಶಕೀಲಾ ಸುಮು ಚೌಧರಿ ಅವರು ನಿರ್ದೇಶಿಸಿದ್ದಾರೆ. 

ಈ ಪ್ರಕರಣದ ಸಂತ್ರಸ್ತ, ಸುಪ್ರೀಂ ಕೋರ್ಟ್ ವಕೀಲ ಸೊಹೆಲ್ ರಾಣಾ ದೂರು ಸಲ್ಲಿಸಿದ್ದಾರೆ ಎಂದು ‘ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.

ADVERTISEMENT

ಹಸೀನಾ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಅಸಾದುಝಮಾನ್ ಖಾನ್, ಮಾಜಿ ಕಾನೂನು ಸಚಿವ ಅನಿಸುಲ್ ಹಕ್, ಮಾಜಿ ಐಜಿಪಿ ಶಾಹಿದುಲ್ ಹಕ್, ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್‌ನ (ಆರ್‌ಎಬಿ) ಮಾಜಿ ಡಿಜಿ ಬೆನಜೀರ್ ಅಹ್ಮದ್ ಮತ್ತು ಆರ್‌ಎಬಿಗೆ ಸಂಬಂಧಿಸಿದ 25 ಮಂದಿ ಅಪರಿಚಿತರ ವಿರುದ್ಧ ವಕೀಲನನ್ನು ಬಲವಂತವಾಗಿ ಕಣ್ಮರೆ ಮಾಡಿದ್ದ ಆಪಾದನೆಯ ದೂರು ದಾಖಲಾಗಿದೆ. 

‘2015ರ ಫೆಬ್ರುವರಿ 10ರಂದು ನನ್ನನ್ನು ಉತ್ತರಾದಲ್ಲಿನ ಸೆಕ್ಟರ್ 5ರಿಂದ ಬಂಧಿಸಿದ್ದರು. ಬಲವಂತವಾಗಿ ವಾಹನಕ್ಕೆ ಹತ್ತಿಸಿಕೊಂಡು, ನನ್ನ ಕಿವಿಗಳು ಮತ್ತು ಜನನಾಂಗಕ್ಕೆ ವಿದ್ಯುತ್ ಶಾಕ್‌ ನೀಡಿದ್ದರು. ಇದರಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ನಂತರವೂ ಹಲವು ದಿನಗಳ ಕಾಲ ಕ್ರೂರವಾಗಿ ಹಿಂಸಿಸಿದರು. ಅವರ ಚಿತ್ರಹಿಂಸೆಗಳನ್ನು ಸಹಿಸಿಕೊಂಡ ನಂತರ ಅಂತಿಮವಾಗಿ ಅದೇ ವರ್ಷದ ಆಗಸ್ಟ್‌ನಲ್ಲಿ ರಾಜ್‌ಶಾಹಿಯ ಗೋದಾಗರಿಯಲ್ಲಿ ನನ್ನನ್ನು ಬಿಡುಗಡೆ ಮಾಡಿದರು’ ಎಂದು ರಾಣಾ ದೂರಿನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ವಿವಾದಾತ್ಮಕ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿ ಹಸೀನಾ ಅವರ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳು ದಂಗೆ ಎದ್ದ ನಂತರ 76 ವರ್ಷದ ಹಸೀನಾ ಅವರು ಇದೇ ಆ.5ರಂದು ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. 

ಜುಲೈನಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ವೇಳೆ ಪೊಲೀಸರು ಕಿರಾಣಿ ಅಂಗಡಿ ಮಾಲೀಕನೊಬ್ಬನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ಹಸೀನಾ ಮತ್ತು ಅವರ ಆಡಳಿತದ ಆರು ಮಂದಿ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಲು ಬಾಂಗ್ಲಾ ನ್ಯಾಯಾಲಯವು ಮಂಗಳವಾರ ಸೂಚನೆ ನೀಡಿ, ತನಿಖೆ ಆರಂಭಿಸಿದೆ.  

‘ಹತ್ಯೆಯಲ್ಲಿ ಭಾಗಿಯಾದವರ ವಿಚಾರಣೆಗೆ ಕ್ರಮ’

ಶೇಖ್ ಹಸೀನಾ ನೇತೃತ್ವದ ಸರ್ಕಾರದ ವಿರುದ್ಧ ಇತ್ತೀಚೆಗೆ ನಡೆದ ವಿದ್ಯಾರ್ಥಿಗಳ ಸಾಮೂಹಿಕ ಚಳವಳಿಯ ವೇಳೆ ನಡೆದ ಹತ್ಯೆಗಳಲ್ಲಿ ಭಾಗಿಯಾದವರನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಬುಧವಾರ ಹೇಳಿದೆ.

‘ವಿಶ್ವಸಂಸ್ಥೆ ಮೇಲ್ವಿಚಾರಣೆಯಲ್ಲಿ ಈ ಘಟನೆಗಳ ತನಿಖೆಗೆ ಮಧ್ಯಂತರ ಸರ್ಕಾರವು ಸಿದ್ಧತೆಗಳನ್ನು ಕೈಗೊಂಡಿದೆ. ಜುಲೈ 1ರಿಂದ ಆಗಸ್ಟ್ 5ರ ಅವಧಿಯಲ್ಲಿ ನಡೆದ ಹತ್ಯೆಗಳನ್ನು ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ವಿಚಾರಣೆ ನಡೆಸಲಿದೆ’ ಎಂದು ಕಾನೂನು ಸಲಹೆಗಾರ ಡಾ. ಆಸಿಫ್ ನಜ್ರುಲ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಚಳವಳಿಯ ಸಂದರ್ಭದಲ್ಲಿ ಜನರಿಗೆ ಕಿರುಕುಳ ನೀಡಲು ಹಾಕಿರುವ ಸುಳ್ಳು ಪ್ರಕರಣಗಳನ್ನು ನಾಳೆಯಿಂದಲೇ ಹಿಂಪಡೆಯಲಾಗುವುದು’ ಎಂದು ಹೇಳಿದರು.

ಆ.5 ರಂದು ಶೇಖ್‌ ಹಸೀನಾ ಸರ್ಕಾರದ ಪತನದ ನಂತರ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದ ಘಟನೆಗಳಲ್ಲಿ 230ಕ್ಕೂ ಹೆಚ್ಚು ಜನರು ಹತರಾಗಿದ್ದರು. ವಿವಾದಾತ್ಮಕ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳ ಚಳವಳಿಯಿಂದ ಭುಗಿಲೆದ್ದ ಮೂರು ವಾರಗಳ ಹಿಂಸಾಚಾರದಲ್ಲಿ ದೇಶದಲ್ಲಿ ಬಲಿಯಾದವರ ಸಂಖ್ಯೆ 560ಕ್ಕೆ ತಲುಪಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.