ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 23 ಜನರ ವಿರುದ್ಧದ ಕೊಲೆ ಪ್ರಕರಣದ ತನಿಖಾ ವರದಿಯನ್ನು ನವೆಂಬರ್ 28ರೊಳಗೆ ಸಲ್ಲಿಸುವಂತೆ ಬಾಂಗ್ಲಾದೇಶದ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.
ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರದ ವಿರುದ್ಧ ಕಳೆದ ಆಗಸ್ಟ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ವೇಳೆ ಢಾಕಾದ ಮೀರ್‌ಪುರದಲ್ಲಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದರು.
ಸಹೋದರನ ಸಾವಿನಲ್ಲಿ ಹಸೀನಾ ಹಾಗೂ ಅವಾಮಿ ಲೀಗ್ ಸರ್ಕಾರದ ಸಚಿವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ಸಹೋದರ ಆಗಸ್ಟ್ 15 ರಂದು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಢಾಕಾದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ.ಡಿ ಜಿಯಾದೂರ್ ರೆಹಮಾನ್, ನವೆಂಬರ್ 28 ರೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.
ಹಸೀನಾ ಅಲ್ಲದೇ, ಮಾಜಿ ಗೃಹ ಸಚಿವ ಅಸಾದುಝಮಾನ್ ಖಾನ್, ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ಒಬೈದುಲ್ ಕ್ವಾಡರ್, ಮಾಜಿ ಸಚಿವ ಅನಿಸುಲ್ ಹಕ್ ಮತ್ತು ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಚೌಧುರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಹಸೀನಾ ವಿರುದ್ಧ ಒಟ್ಟು 225 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 194–ಕೊಲೆ ಪ್ರಕರಣ, 16– ನರಮೇಧ ಪ್ರಕರಣ, 3–ಅಪಹರಣ, 11–ಕೊಲೆ ಯತ್ನ ಪ್ರಕರಣಗಳು ಸೇರಿವೆ ಎಂದು ವರದಿಯಾಗಿದೆ.
ವಿವಾದಾತ್ಮಕ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ ಹಸೀನಾ ಸರ್ಕಾರದ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆಗಸ್ಟ್ 5 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.