ಢಾಕಾ: 2004ರಲ್ಲಿ ಚುನಾವಣಾ ರ್‍ಯಾಲಿ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಪ್ರಕರಣದಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಖ್ ರಹಮಾನ್ ಸೇರಿ 19 ಮಂದಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೆಪ್ಟೆಂಬರ್ 18ರಂದು ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು.
ರಹಮಾನ್ ತಲೆಮರೆಸಿಕೊಂಡಿರುವುದರಿಂದ ಆತನ ಗೈರುಹಾಜರಿಯಲ್ಲೇ ವಿಚಾರಣೆ ಮುಕ್ತಾಯಗೊಳಿಸಲಾಗಿತ್ತು. ಆತ ಸದ್ಯ ಲಂಡನ್‌ನಲ್ಲಿ ಇದ್ದು, ಅಲ್ಲಿನ ಆಶ್ರಯ ಕೋರಿದ್ದಾನೆ ಎನ್ನಲಾಗಿದೆ.
ಢಾಕಾದಲ್ಲಿ ಅವಾಮಿ ಲೀಗ್ ಪಕ್ಷದ ಚುನಾವಣಾ ಪ್ರಚಾರ ರ್‍ಯಾಲಿ ವೇಳೆ ನಡೆದಿದ್ದ ದಾಳಿಯಲ್ಲಿ 24 ಜನ ಮೃತಪಟ್ಟು, 500 ಜನ ಗಾಯಗೊಂಡಿದ್ದರು. ಬಾಂಗ್ಲಾದೇಶದ ಹಾಲಿ ಪ್ರಧಾನಿ ಶೇಖ್ ಹಸೀನಾ ಸಹ ಗಾಯಗೊಂಡಿದ್ದರು. ಇವರು ಆಗ ಪ್ರತಿಪಕ್ಷ ನಾಯಕಿಯಾಗಿದ್ದರು. ಬಾಂಗ್ಲಾದೇಶ ಅವಾಮಿ ಲೀಗ್‌ನ ಮಹಿಳಾ ಘಟಕದ ಅಧ್ಯಕ್ಷೆ, ಮಾಜಿ ಅಧ್ಯಕ್ಷ ಝಿಲುರ್ ರಹಮಾನ್ ಪತ್ನಿ ಐವಿ ರಹಮಾನ್ ಸಹ ದಾಳಿಯಲ್ಲಿ ಮೃತಪಟ್ಟಿದ್ದರು.
ಭ್ರಷ್ಟಾಚಾರ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಪ್ರಧಾನಿಖಲೀದಾ ಜಿಯಾ ಅವರ ಹೆಸರು ಪ್ರಕರಣದಲ್ಲಿ ಸೇರ್ಪಡೆಯಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.