ADVERTISEMENT

Bangla Unrest: ಬಾಂಗ್ಲಾದಲ್ಲಿ ಹಿಂದೂ ಕುಟುಂಬದ ಮನೆಗೆ ಬೆಂಕಿ

ಪಿಟಿಐ
Published 14 ಆಗಸ್ಟ್ 2024, 14:26 IST
Last Updated 14 ಆಗಸ್ಟ್ 2024, 14:26 IST
<div class="paragraphs"><p>ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂಗಳಿಂದ ಪ್ರತಿಭಟನೆ</p></div>

ಬಾಂಗ್ಲಾದೇಶದ ಢಾಕಾದಲ್ಲಿ ಹಿಂದೂಗಳಿಂದ ಪ್ರತಿಭಟನೆ

   

– ರಾಯಿಟರ್ಸ್ ಚಿತ್ರ

ಢಾಕಾ: ಬಾಂಗ್ಲಾದೇಶದ ವಾಯವ್ಯದಲ್ಲಿ ಹಿಂದೂ ಕುಟುಂಬಕ್ಕೆ ಸೇರಿದ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ADVERTISEMENT

ಈ ಕುಟುಂಬ ಯಾವುದೇ ರಾಜಕೀಯ ನಂಟು ಹೊಂದಿರಲಿಲ್ಲ. ಶೇಖ್ ಹಸೀನಾ ಅವರ ನೇತೃತ್ವದ ಸರ್ಕಾರ ಪತನವಾದ ನಂತರ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದಿರುವ ಉದ್ದೇಶಿತ ದಾಳಿಯ ಇತ್ತೀಚಿನ ಘಟನೆ ಇದು ಎಂದು ಬುಧವಾರ ಮಾಧ್ಯಮ ವರದಿ ಮಾಡಿದೆ. 

ಠಾಕೂರ್‌ಗಾಂವ್ ಸದರ್ ಉಪಜಿಲ್ಲಾ ವ್ಯಾಪ್ತಿಯ ಅಕ್ಚಾ ಯೂನಿಯನ್‌ನ ಫರಾಬಾರಿ ಮಂದಿರಪಾರಾ ಗ್ರಾಮದಲ್ಲಿ ಮಂಗಳವಾರ ಸಂಜೆ 7.30ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು, ಕಾಳೇಶ್ವರ ಬರ್ಮನ್ ಎಂಬುವರ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಅಕ್ಚಾ ಯೂನಿಯನ್ ಪರಿಷತ್ ಅಧ್ಯಕ್ಷ ಸುಬ್ರತ ಕುಮಾರ್ ಬರ್ಮನ್ ತಿಳಿಸಿರುವುದಾಗಿ ‘ಡೈಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ. 

ಸ್ಥಳೀಯರು ತಕ್ಷಣ ಸ್ಪಂದಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದವರು ಸುರಕ್ಷಿತವಾಗಿದ್ದಾರೆ ಎಂದು ಬರ್ಮನ್‌ ಹೇಳಿದ್ದಾರೆ.

ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಯೂನಸ್ ಮುಹಮ್ಮದ್, ತಮ್ಮ ಸರ್ಕಾರವು ಅಪರಾಧಿಗಳನ್ನು ಶಿಕ್ಷಿಸಲಿದೆ ಎಂದು ಸಂಕಷ್ಟದಲ್ಲಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಭರವಸೆ ನೀಡಿದ ಕೆಲವೇ ಗಂಟೆಗಳ ನಂತರ ಈ ಕೃತ್ಯ ನಡೆದಿದೆ.

‘ಘಟನೆ ನಡೆದ ತಕ್ಷಣವೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ತನಿಖೆ ನಡೆಯುತ್ತಿದೆ’ ಎಂದು ಠಾಕೂರ್‌ಗಾಂವ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಎಬಿಎಂ ಫಿರೋಜ್ ವಹೀದ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಇದೇ ಯೂನಿಯನ್‌ನ ನಿಂಬಾರಿ ಕಮರ್‌ಪಾರ ಗ್ರಾಮದಲ್ಲಿ ಅನಂತ ಬರ್ಮನ್‌ ಅವರ ಮನೆಯನ್ನು ದುಷ್ಕರ್ಮಿಗಳು ಸುಟ್ಟು ಭಸ್ಮ ಮಾಡಿದ ಘಟನೆ ನಡೆದಿತ್ತು ಎಂದು ‘ಡೈಲಿ ಸ್ಟಾರ್’ ವರದಿ ತಿಳಿಸಿದೆ.

‘ಹಸೀನಾ ಅವರ ಸರ್ಕಾರದ ಪತನದ ನಂತರ ಇಂತಹ ಕೃತ್ಯಗಳು ನಡೆಯುತ್ತಿವೆ. ಹಿಂದೂ ಸಮುದಾಯದ ಜನರು ಭಯದಿಂದ ಇಲ್ಲಿ ಬದುಕುತ್ತಿದ್ದಾರೆ’ ಎಂದು ಫರಾಬಾರಿ ನಿವಾಸಿ ರಬಿನ್ ರಾಯ್ ಹೇಳಿದ್ದಾರೆ. 

ಆ.5ರಂದು ಹಸೀನಾ ಸರ್ಕಾರ ಪತನವಾದ ನಂತರ 48 ಜಿಲ್ಲೆಗಳಾದ್ಯಂತ 278 ಸ್ಥಳಗಳಲ್ಲಿ ಅಲ್ಪಸಂಖ್ಯಾತ ಸಮುದಾಯವು ದಾಳಿ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದೆ ಎಂದು ಬಾಂಗ್ಲಾದೇಶದ ರಾಷ್ಟ್ರೀಯ ಹಿಂದೂ ಮಹಾ ಒಕ್ಕೂಟ ಹೇಳಿತ್ತು. ಅದೇ ದಿನ ಹಿಂದೂ ಧರ್ಮೀಯರನ್ನು ಗುರಿಯಾಗಿಸಿಕೊಂಡು ಹಲವೆಡೆ ಬೆಂಕಿ ಹಚ್ಚಿರುವ ಘಟನೆಗಳು ನಡೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.