ಢಾಕಾ: ಬಾಂಗ್ಲಾದೇಶದಲ್ಲಿ ಭಾನುವಾರ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ. ಸಾವಿರಾರು ಯೋಧರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯು ಪ್ರಮುಖ ರಸ್ತೆಗಳಲ್ಲಿ ಶನಿವಾರ ಗಸ್ತು ತಿರುಗಿದರು.
ಸಂಸತ್ತಿನ 299 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 40,183 ಮತಗಟ್ಟೆಗಳನ್ನು ತೆರೆಯಲಾಗಿದೆ.
ಪ್ರಧಾನಿ ಶೇಕ್ ಹಸೀನಾ ಅವರು ದಾಖಲೆಯ ನಾಲ್ಕನೇ ಅವಧಿಗೆ ಮರು ಆಯ್ಕೆ ಬಯಸಿ ಕಣಕ್ಕೆ ಇಳಿದಿದ್ದಾರೆ. ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಖಲೀದಾ ಜಿಯಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದು ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿದೆ. ಜಿಯಾ ಅನುಪಸ್ಥಿತಿಯಲ್ಲಿ ಪಕ್ಷ ಕಣಕ್ಕೆ ಇಳಿದಿದೆ.
ಇಸ್ಲಾಂ ಮೂಲಭೂತವಾದಿ ಜಮಾತ್ –ಎ–ಇಸ್ಲಾಮಿ ಪಕ್ಷಕ್ಕೆ ಈ ಬಾರಿ ಸ್ಪರ್ಧಿಸಲು ಅನುವು ಮಾಡಿಕೊಡಲಾಗಿದೆ.
ಕಟ್ಟುನಿಟ್ಟಿನ ನಿಗಾ: ಮತದಾನದ ದಿನದಂದು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ಹೆಚ್ಚು ನಿಗಾ ಇಡುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಹಿಂದೂ ಧರ್ಮಕ್ಕೆ ಸೇರಿದವರ ಮೂರು ಮನೆಗಳಿಗೆ ಡಿಸೆಂಬರ್ 16 ಹಾಗೂ 26ರಂದು ಬೆಂಕಿ ಹಚ್ಚಲಾಗಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಅಲ್ಪಸಂಖ್ಯಾತರ ಮೇಲೆ ನಡೆಯುವ ಯಾವುದೇ ದಾಳಿ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಚುನಾವನಾ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಹಿಂದೂ–ಬೌದ್ಧ–ಕ್ರಿಶ್ಚಿಯನ್ ಸಂಘಟನೆಯ ವಕ್ತಾರೆ ಕಾಜೋಲ್ ದೇಬ್‌ನಾತ್ ತಿಳಿಸಿದ್ದಾರೆ.
ಹಸೀನಾ ಅವರ ಅವಾಮಿ ಲೀಗ್ ಹಾಗೂ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯ ಕಾರ್ಯಕರ್ತರ ಮಧ್ಯೆ ಇತ್ತೀಚೆಗೆ ನಡೆದ ಘರ್ಷಣೆಯಲ್ಲಿ 13 ಮಂದಿ ಮೃತಪಟ್ಟಿದ್ದರು.
ವದಂತಿಗಳ ಮೇಲೆ ನಿಗಾ
ಚುನಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಡಿಯೊ ಹಾಗೂ ವದಂತಿಗಳನ್ನು ಹರಡುತ್ತಿದ್ದ ಆರೋಪದ ಮೇಲೆ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವದಂತಿ ಹರಡದಂತೆ ತಡೆಯಲು ಭಾನುವಾರ ಮಧ್ಯರಾತ್ರಿಯವರೆಗೂ 3ಜಿ ಹಾಗೂ 4ಜಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಮೊಬೈಲ್ ಸೇವಾದಾತ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ.
ಅಂಕಿ–ಅಂಶ
* ಮತದಾರರ ಸಂಖ್ಯೆ 10.41 ಕೋಟಿ
* ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು – 1,848
* ದೇಶದಾದ್ಯಂತ ಭದ್ರತೆಗೆ ನಿಯೋಜಿಸಿರುವ ಸಿಬ್ಬಂದಿ – 6 ಲಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.