ADVERTISEMENT

ಬಾಂಗ್ಲಾದ ನೊಬೆಲ್‌ ಪುರಸ್ಕೃತ ಯೂನಸ್‌ಗೆ ಒಲಿಂಪಿಕ್ಸ್‌ನಲ್ಲಿ ಗೌರವ ಪುರಸ್ಕಾರ

ಏಜೆನ್ಸೀಸ್
Published 15 ಜುಲೈ 2021, 6:50 IST
Last Updated 15 ಜುಲೈ 2021, 6:50 IST
ಮುಹಮ್ಮದ್ ಯೂನಸ್
ಮುಹಮ್ಮದ್ ಯೂನಸ್   

ಟೋಕಿಯೊ: ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕ್‌ಗಳ ಸಂಸ್ಥಾಪಕ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಅವರು ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗೌರವ ಪುರಸ್ಕಾರಕ್ಕೆ ಪಾತ್ರರಾಗಲಿದ್ದಾರೆ.

ಎರಡನೇ ಬಾರಿಗೆ ಈ ಪುರಸ್ಕಾರ ನೀಡುತ್ತಿರುವುದಾಗಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಗುರುವಾರ ತಿಳಿಸಿದೆ.

ಅಭಿವೃದ್ಧಿಗಾಗಿ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ವ್ಯಾಪಕ ಕಾರ್ಯಗಳಿಗಾಗಿ ಯೂನಸ್‌ ಅವರನ್ನು ಗೌರವಿಸಲಾಗುವುದು ಎಂದು ಐಒಸಿ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

81 ವರ್ಷದ ಮುಹಮ್ಮದ್ ಯೂನಸ್ ಅವರಿಗೆ 2006ರಲ್ಲಿ ನೊಬೆಲ್‌ ಪ್ರಶಸ್ತಿ ದೊರೆತಿತ್ತು. ಅವರನ್ನು ಟೋಕಿಯೊ ಒಲಿಂಪಿಕ್ಸ್‌ನ ಉದ್ಘಾಟನಾ ದಿನದ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.

ಕ್ರೀಡೆಯ ಮೂಲಕ ಸಂಸ್ಕೃತಿ, ಶಿಕ್ಷಣ, ಶಾಂತಿ ಮತ್ತು ಅಭಿವೃದ್ಧಿ ಕಾರ್ಯದ ಪ್ರಯತ್ನಗಳನ್ನು ಗುರುತಿಸಲು ಐದು ವರ್ಷಗಳ ಹಿಂದೆ ಒಲಿಂಪಿಕ್‌ ಗೌರವ ಪುರಸ್ಕಾರ ನೀಡುವುದನ್ನು ಆರಂಭಿಸಲಾಗಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಈ ಪುರಸ್ಕಾರ ನೀಡಲಾಗಿತ್ತು. ಆಗ ಕೀನ್ಯಾದ ಮಾಜಿ ಒಲಿಂಪಿಯನ್‌ ಕಿಪ್‌ ಕೀನೊ ಅವರು ಇದಕ್ಕೆ ಪಾತ್ರರಾಗಿದ್ದರು. ಅವರು ತಮ್ಮ ದೇಶದಲ್ಲಿ ಮಕ್ಕಳಿಗಾಗಿ ವಸತಿ, ಶಾಲೆ ಮತ್ತು ಅಥ್ಲಿಟ್‌ಗಳಿಗೆ ಕ್ರೀಡಾಪಟುಗಳ ತರಬೇತಿ ಕೇಂದ್ರನ್ನು ತೆರೆದಿದ್ದಕ್ಕೆ ಈ ಗೌರವಕ್ಕೆ ಪಾತ್ರರಾಗಿದ್ದರು.

ಯೂನಸ್ ಅವರು 1980ರ ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಿದರು. ಅವರ ‘ಯೂನಸ್‌ ಸ್ಪೋರ್ಟ್ಸ್‌ ಹಬ್‌’ ಕ್ರೀಡೆ ಮೂಲಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಾಮಾಜಿಕ ಉದ್ಯಮಗಳ ಜಾಲವಾಗಿ ಕಾರ್ಯ ನಿರ್ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.