ಢಾಕಾ: ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಭಾನುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಅಭೂತಪೂರ್ವ ಬಹುಮತ ಗಳಿಸಿದೆ. ಇದರೊಂದಿಗೆ ಪ್ರಧಾನಿ ಶೇಖ್ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.
ಸಂಸತ್‌ನ ಒಟ್ಟು 300 ಸ್ಥಾನಗಳ ಪೈಕಿ 299 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಹಸೀನಾ ನೇತೃತ್ವದ ಪಕ್ಷವು 223 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷವು (ಬಿಎನ್‌ಪಿ) ಕೇವಲ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಕಂಡಿದೆ. ಬಾಂಗ್ಲಾದೇಶ ಕಲ್ಯಾಣ್ ಪಕ್ಷ, ಜಾತಿಯಾ ಸಮಾಜತಾಂತ್ರಿಕ್ ದಳ ಮತ್ತು ದಿ ವರ್ಕರ್ಸ್ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದರೆ, ಪಕ್ಷೇತರ ಅಭ್ಯರ್ಥಿಗಳು 62 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ಗೋಪಾಲ್‌ಗಂಜ್ –2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಸೀನಾ ಅವರು ಪ್ರಚಂಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸತತ ಎಂಟನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಪ್ರಧಾನಿ ಖಾಲಿದಾ ಜಿಯಾ ನೇತೃತ್ವದ ಬಿಎನ್‌ಪಿಯು ಚುನಾವಣೆಯನ್ನು ‘ನಕಲಿ’ ಎಂದು ಬಣ್ಣಿಸಿದೆ ಮತ್ತು ಮಂಗಳವಾರದಿಂದಲೇ ಶಾಂತಿಯುತ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿರೋಧಿ ಚಳವಳಿಯನ್ನು ಮುಂದುವರಿಸುವುದಾಗಿ ಹೇಳಿದೆ.
ಈ ಬಾರಿ ಬಿಎನ್‌ಪಿ ಮತ್ತು ಇತರ 15 ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು.
ಚುನಾವಣೆಯಲ್ಲಿ ಶೇ 41.8ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಎನ್‌ಪಿ ಮತ್ತು ಜಮಾತ್–ಇ–ಇಸ್ಲಾಮಿ ಪಕ್ಷಗಳ ಚುನಾವಣಾ ಬಹಿಷ್ಕಾರದ ಕರೆಗಳನ್ನು ಜನರು ಕಡೆಗಣಿಸಿ ಮತ ಚಲಾಯಿಸಿದ್ದಾರೆ. ಅವರಿಗೆ ಧನ್ಯವಾದಗಳುಒಬೈದುಲ್ ಖಾದರ್, ಅವಾಮಿ ಲೀಗ್ ಪಕ್ಷದ ಪ್ರಧಾನ ಕಾರ್ಯದರ್ಶಿ
ಭಾರತವು ಬಾಂಗ್ಲಾದೇಶದ ಮಿತ್ರ ದೇಶ. ಅದು 1971 ಮತ್ತು 1975ರಲ್ಲಿ ನಮಗೆ ಬೆಂಬಲ ನೀಡಿದೆ. ನನಗೆ ನನ್ನ ಸಹೋದರಿಗೆ ಮತ್ತು ಕುಟುಂಬಸ್ಥರಿಗೆ ಆಶ್ರಯ ನೀಡಿತ್ತು. ಪ್ರತಿಯೊಂದು ದೇಶದೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅದೇ ನಮ್ಮ ಧ್ಯೇಯ– ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನಿ
ಚುನಾವಣೆಯನ್ನು ಯಶಸ್ವಿಗೊಳಿಸಿದ ಬಾಂಗ್ಲಾದೇಶದ ಪ್ರಜೆಗಳಿಗೆ ಅಭಿನಂದನೆಗಳು. ಬಾಂಗ್ಲಾದೊಂದಿಗಿನ ಪಾಲುದಾರಿಕೆಯನ್ನು ಬಲಗೊಳಿಸಲು ನಾವು ಬದ್ಧ– ನರೇಂದ್ರ ಮೋದಿ, ಭಾರತದ ಪ್ರಧಾನಿ
ಜನವರಿ 7ರಂದು ‘ನೆಪಮಾತ್ರಕ್ಕೆ’ ನಡೆದ ಚುನಾವಣೆಯನ್ನು ರದ್ದು ಮಾಡಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ಸೋಮವಾರ ಆಗ್ರಹಿಸಿದೆ. ಇದೇ ವೇಳೆ ಮತದಾನ ಪ್ರಮಾಣದ ವಿಶ್ವಾಸಾರ್ಹತೆಯನ್ನು ಅದು ಪ್ರಶ್ನಿಸಿದೆ. ಬೇಡಿಕೆಗೆ ಸಾರ್ವಜನಿಕರ ಬೆಂಬಲ ಪಡೆಯಲು ಮಂಗಳವಾರ ಮತ್ತು ಬುಧವಾರ ಸಂಪರ್ಕ ಕಾರ್ಯಕ್ರಮ ಆಯೋಜಿಸಿದೆ.
ಸರ್ಕಾರದ ಮುಖ್ಯಸ್ಥೆಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಜಗತ್ತಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶೇಖ್ ಹಸೀನಾ ಅವರು ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಸ್ಥಿರತೆಯ ಕಾರಣದಿಂದ ಬೆಂಬಲಿಗರ ದೃಷ್ಟಿಯಲ್ಲಿ ‘ಉಕ್ಕಿನ ಮಹಿಳೆ’ಯಾಗಿದ್ದರೆ ವಿರೋಧಿಗಳ ಪಾಲಿಗೆ ನಿರಂಕುಶಾಧಿಕಾರಿಯಾಗಿದ್ದಾರೆ.
76 ವರ್ಷದ ಹಸೀನಾ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಅವರ ಪುತ್ರಿ. ಇವರು ದಕ್ಷಿಣಾ ಏಷ್ಯಾದ ಆಯಕಟ್ಟಿನ ಸ್ಥಳದಲ್ಲಿರುವ ಬಾಂಗ್ಲಾದೇಶವನ್ನು 2009ರಿಂದ ಆಳುತ್ತಿದ್ದಾರೆ. ಸದ್ಯ 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸತತ ನಾಲ್ಕನೇ ಅವಧಿಗೆ ಮತ್ತು ಒಟ್ಟಾರೆಯಾಗಿ ಐದನೇ ಬಾರಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಸ್ವತಂತ್ರ ಬಾಂಗ್ಲಾದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶ) 1947ರಲ್ಲಿ ಜನಿಸಿದ ಇವರು ಢಾಕಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದ್ದರು. 1975ರಲ್ಲಿ ತಂದೆ ತಾಯಿ ಮತ್ತು ಮೂವರು ಸಹೋದರರ ಹತ್ಯೆಯಾಯಿತು. ನಂತರ ತಮ್ಮ ಪತಿಯೊಂದಿಗೆ ಸ್ವಯಂ ಗಡೀಪಾರಾಗಿ ಭಾರತದಲ್ಲಿ ವಾಸವಿದ್ದ ಅವರು 1981ರಲ್ಲಿ ಅಲ್ಲಿಂದಲೇ ಆವಾಮಿ ಲೀಗ್ ಅಧ್ಯಕ್ಷರಾಗಿ ಆಯ್ಕೆಯಾದರು.
ಅದೇ ವರ್ಷ ಬಾಂಗ್ಲಾದೇಶಕ್ಕೆ ಮರಳಿ ಸೇನಾ ಆಡಳಿತ ಕೊನೆಗಾಣಿಸಲು ಹೋರಾಟ ನಡೆಸಿದರು. ಇದರಿಂದಾಗಿ ಹಲವು ಬಾರಿ ಗೃಹ ಬಂಧನಕ್ಕೆ ಒಳಗಾದರು. 1991ರಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಬಹುಮತ ಗಳಿಸುವಲ್ಲಿ ವಿಫಲವಾಯಿತು. ಐದು ವರ್ಷಗಳ ನಂತರ ನಡೆದ ಮತ್ತೊಂದು ಚುನಾವಣೆಯಲ್ಲಿ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ 2001ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನುಭವಿಸಿದರು. ನಂತರ 2008ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿ ಪಟ್ಟಕ್ಕೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.