ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದ್ದು, ಚುನಾವಣಾ ಹಿಂಸಾಚಾರಕ್ಕೆ ಭಾನುವಾರ 17 ಮಂದಿ ಬಲಿಯಾಗಿದ್ದಾರೆ.
ಬೆಳಗ್ಗೆ 8 ಗಂಟೆಗೆ ಆರಂಭವಾದ ಚುನಾವಣೆ ಸಂಜೆ 4ಕ್ಕೆ ಮುಕ್ತಾಯವಾಯಿತು.
ಎಂಟು ಗಂಟೆ ಕಾಲ ನಡೆದ ಮತದಾನ ಪ್ರಕ್ರಿಯೆ ಪೂರ್ಣವಾಗಿದ್ದು, ಮತ ಎಣಿಕೆಗೆ ಸಿದ್ಧತೆ ನಡೆಯುತ್ತಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಮಾಹಿತಿ ನೀಡಿದ್ದಾರೆ.
ಹಿಂಸಾಚಾರದಿಂದ ವಿವಿಧ ಪಕ್ಷಗಳ ಹಲವು ಕಾರ್ಯಕರ್ತರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.ಚುನಾವಣೆ ಸಂಬಂಧ ದೇಶದಾದ್ಯಂತ ಅಭ್ಯರ್ಥಿಗಳಿಂದ 100ಕ್ಕೂ ಹೆಚ್ಚು ದೂರುಗಳು ಬಂದಿವೆ.
ಮೃತರ ಪೈಕಿ ಸರ್ಕಾರಿ ಅಧಿಕಾರಿ, ಆಡಳಿತಾರೂಢ ಪಕ್ಷದ ಐವರು ಕಾರ್ಯಕರ್ತರು ಅಲ್ಲದೆ ಬಿಎನ್‌ಪಿ ಸದಸ್ಯರು ಸೇರಿದ್ದಾರೆ ಎನ್ನಲಾಗಿದೆ.
ತಮ್ಮ ಏಜೆಂಟರಿಗೆ ಮತಗಟ್ಟೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಗೆ ತಡೆ ಒಡ್ಡಿದ್ದರು. ಆಡಳಿತಾರೂಢ ಪಕ್ಷದ ವಿರುದ್ಧ ಅವರು ಆರೋಪ ಹೊರಿಸಿದ್ದಾರೆ.
ಚುನಾವಣೆ ನಿಮಿತ್ತ ಮೊಬೈಲ್ ಡೇಟಾ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಖಾಸಗಿ ವಾಹಿನಿ ಜಮುನಾ ಟಿವಿ ಪ್ರಸಾರವನ್ನು ಕೇಬಲ್ ಆಪರೇಟರ್‌ಗಳು ಕಾರಣ ನೀಡದೇ ಸ್ಥಗಿತಗೊಳಿಸಿದ್ದರು.
ಮೊದಲ ಬಾರಿಗೆ ಇವಿಎಂ ಬಳಕೆ
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಇವಿಎಂ (ಮತಯಂತ್ರ) ಬಳಸಲಾಯಿತು. ಕೇವಲ 6 ಕ್ಷೇತ್ರಗಳಲ್ಲಿ ಮಾತ್ರ ಪ್ರಾಯೋಗಿಕವಾಗಿ ಬಳಕೆ ಮಾಡಲಾಯಿತು. ಮತದಾರರಿಂದ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಎರಡು ಕಡೆ ಮಾತ್ರ ಮತಯಂತ್ರಗಳಲ್ಲಿ ದೋಷ ಕಂಡುಬಂದಿತು. ಈ ಆರು ಕ್ಷೇತ್ರಗಳಲ್ಲಿ 21 ಲಕ್ಷ ಮತದಾರರಿದ್ದಾರೆ. 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.